ಹೈದರಾಬಾದ್:ಕುಡಿತದ ಚಟಕ್ಕೆ ಬಿದ್ದು ತಾಯ್ತನವನ್ನೇ ಮರೆತ ಮಹಿಳೆಯೊಬ್ಬಳು, ತನ್ನ ಒಂಬತ್ತು ತಿಂಗಳ ಕಂದಮ್ಮನನ್ನು ಕೆರೆಯಲ್ಲಿ ಮುಳುಗಿಸಿ ಕ್ರೂರವಾಗಿ ಕೊಂದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂಜಾಪುರದ ನಿವಾಸಿ ಲೋಕಸಾನಿ ರಾಜೇಶ್ವರಿ (34) ಬಂಧಿತ ಆರೋಪಿ. ಈಕೆಗೆ ಒಂಬತ್ತು ತಿಂಗಳ 'ಅನುರಾಧ' ಎಂಬ ಹೆಣ್ಣು ಮಗುವಿತ್ತು. ತೀವ್ರ ಮದ್ಯದ ಚಟಕ್ಕೆ ಒಳಗಾಗಿದ್ದ ರಾಜೇಶ್ವರಿ, ಘಟನೆಯ ದಿನದಂದು ಪೂರ್ಣ ಮದ್ಯದ ಅಮಲಿನಲ್ಲಿ ಮಗುವನ್ನು ಬೈರಾಮಲ್ಗುಡ ಕೆರೆಯ ಬಳಿಗೆ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಎಲ್‌ಬಿ ನಗರ ಪೊಲೀಸರು, ಕೆರೆಯಿಂದ ಮಗುವಿನ ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ಸಮಯದಲ್ಲಿ ಆರೋಪಿ ರಾಜೇಶ್ವರಿ ತೀವ್ರ ಮದ್ಯದ ಅಮಲಿನಲ್ಲಿದ್ದಳು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಎಲ್‌ಬಿ ನಗರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
