ರಾಜ್ಯ

Bangalore :ಹೋಟೆಲ್ ಅಡುಗೆ ಮನೆಗಳಲ್ಲೂ ಸಿಸಿಟಿವಿ ಕ್ಯಾಮೆರಾ ಕಡ್ಡಾಯ: ಯು.ಟಿ. ಖಾದರ್ ಎಚ್ಚರಿಕೆ


ಬೆಂಗಳೂರು: ರಾಜ್ಯದ ಹೋಟೆಲ್ ಹಾಗೂ ಉಪಹಾರ ಗೃಹಗಳಲ್ಲಿ ಗ್ರಾಹಕರಿಗೆ ನೀಡುವ ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಆಹಾರ ಮತ್ತು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯನ್ನಿಡಲು ಮುಂದಾಗಿದೆ. ಇನ್ಮುಂದೆ ಹೋಟೆಲ್‌ಗಳ ಅಡುಗೆ ಮನೆಗಳಲ್ಲೂ (ಕಿಚನ್) ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅವುಗಳ ದೃಶ್ಯಾವಳಿಗಳನ್ನು ಗ್ರಾಹಕರು ನೇರವಾಗಿ ವೀಕ್ಷಿಸುವಂತಹ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

​ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗ್ರಾಹಕರು ಸೇವಿಸುವ ಆಹಾರ ಹೇಗೆ ತಯಾರಾಗುತ್ತಿದೆ ಮತ್ತು ಅಲ್ಲಿ ಎಷ್ಟರಮಟ್ಟಿಗೆ ನೈರ್ಮಲ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಲಾಗುತ್ತಿದೆ ಎಂಬುದು ಸಾರ್ವಜನಿಕರಿಗೂ ಪ್ರತ್ಯಕ್ಷವಾಗಿ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಮಾರ್ಗಸೂಚಿಗಳನ್ನು ಮತ್ತಷ್ಟು ಕಟ್ಟುನಿಟ್ಟಗೊಳಿಸಲಾಗುವುದು ಎಂದಿದ್ದಾರೆ.

ನಿಯಮ ಉಲ್ಲಂಘಿಸಿದರೆ ಹೋಟೆಲ್ ಸೀಲ್ ಡೌನ್!

ಗ್ರಾಹಕರಿಗೆ ಉತ್ತಮ ಹಾಗೂ ಸುರಕ್ಷಿತ ಆಹಾರವನ್ನು ಒದಗಿಸುವುದು ಪ್ರತಿಯೊಂದು ಹೋಟೆಲ್ ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈಗಾಗಲೇ ರಾಜಧಾನಿಯ ಹಲವು ಪ್ರಮುಖ ಹೋಟೆಲ್‌ಗಳ ಮೇಲೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಅಡುಗೆಗೆ ಬಳಸುವ ಪದಾರ್ಥಗಳ ಮಾದರಿಯನ್ನು (ಸ್ಯಾಂಪಲ್ಸ್) ಸಂಗ್ರಹಿಸಿ ಪ್ರಯೋಗಾಲಯಕ್ಕೆ (ಲ್ಯಾಬ್) ಕಳುಹಿಸಿದ್ದಾರೆ. ಲ್ಯಾಬ್ ವರದಿ ಬಂದ ತಕ್ಷಣವೇ ನಿಯಮ ಮೀರಿ ನಡೆದುಕೊಂಡ ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

​ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್‌ಗಳಿಗೆ ಆರಂಭಿಕ ಹಂತದಲ್ಲಿ ನೋಟಿಸ್ ಜಾರಿ ಮಾಡಲಾಗುತ್ತದೆ. ಅದಾಗ್ಯೂ ಲೋಪದೋಷ ತಿದ್ದುಪಡೆ ಮಾಡಿಕೊಳ್ಳದಿದ್ದರೆ ಅಂತಹ ಹೋಟೆಲ್‌ಗಳ ಪರವಾನಗಿ ರದ್ದುಗೊಳಿಸಿ, ಮುಲಾಜಿಲ್ಲದೆ ಸೀಲ್ ಡೌನ್ ಮಾಡಲಾಗುವುದು. ಅಧಿಕಾರಿಗಳು ಯಾವುದೇ ರಾಜಕೀಯ ಅಥವಾ ವ್ಯಕ್ತಿಗತ ಪ್ರಭಾವಕ್ಕೆ ಒಳಗಾಗದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

​ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಹಾಗೂ ಗ್ರಾಹಕರಿಗೆ ಮೋಸ ಮಾಡುವ ಯಾವುದೇ ಹೋಟೆಲ್ ಇರಲಿ, ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಹೋಟೆಲ್ ಮಾಲೀಕರು ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಬೇಕು, ಇಲ್ಲವಾದರೆ ಇಲಾಖೆಯ ಕಠಿಣ ಕ್ರಮ ಎದುರಿಸಲು ಸಿದ್ಧರಿರಬೇಕು ಎಂದು ಎಚ್ಚರಿಸಿದ್ದಾರೆ.



image