ಬಂಟ್ವಾಳ: ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಪಾಸಣಾ ಅಭಿಯಾನ ನಡೆಸಲಾಗಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಒಟ್ಟು 13 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂಚಾರ ವಿಭಾಗದ ಉಪನಿರೀಕ್ಷಕರಾದ (ಎಸ್.ಐ) ಆದರ್ಶ್ ಅವರ ನೇತೃತ್ವದ ಪೊಲೀಸ್ ತಂಡವು ಈ ಕಾರ್ಯಾಚರಣೆ ನಡೆಸಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ, ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಈ ತಪಾಸಣೆ ಕೈಗೊಳ್ಳಲಾಗಿತ್ತು.
೮ ವಾಹನಗಳಲ್ಲಿ ಮಿತಿಮೀರಿದ ವಿದ್ಯಾರ್ಥಿಗಳ ಸಾಗಾಟ:
ಪರಿಶೀಲನೆಯ ವೇಳೆ ಸಾಮರ್ಥ್ಯ ಮೀರಿ ಅಪಾಯಕಾರಿ ರೀತಿಯಲ್ಲಿ ಮಕ್ಕಳನ್ನು ಸಾಗಿಸುತ್ತಿದ್ದ 8 ವಾಹನಗಳನ್ನು ಪತ್ತೆಹಚ್ಚಿ, ತಕ್ಷಣವೇ ಕೇಸ್ ದಾಖಲಿಸಲಾಗಿದೆ. ಇದರ ಜೊತೆಗೆ, ಸೂಕ್ತ ದಾಖಲೆಗಳನ್ನು ಹೊಂದಿರದ ಹಾಗೂ ವಾಹನಕ್ಕೆ ಸಂಬಂಧಿಸಿದ ಅಗತ್ಯ ಮಾನದಂಡಗಳನ್ನು ಪಾಲಿಸದ ಮತ್ತೂ 5 ವಾಹನಗಳ ಮೇಲೆಯೂ ಕಾನೂನು ಕ್ರಮ ಜರುಗಿಸಲಾಗಿದೆ.
ಪೊಲೀಸ್ ಇಲಾಖೆಯಿಂದ ಖಡಕ್ ಎಚ್ಚರಿಕೆ:
"ಶಾಲಾ ವಾಹನಗಳಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಲಕರು ಹಾಗೂ ವಾಹನ ಮಾಲೀಕರ ಕರ್ತವ್ಯವಾಗಿದೆ. ಮಿತಿಮೀರಿ ಮಕ್ಕಳನ್ನು ಸಾಗಿಸುವುದರಿಂದ ಅಪಘಾತಗಳ ಸಂದರ್ಭದಲ್ಲಿ ಭಾರಿ ಜೀವಹಾನಿಯಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಇಂತಹ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲೂ ಈ ತಪಾಸಣೆ ಮುಂದುವರಿಯಲಿದೆ" ಎಂದು ಸಂಚಾರ ಪೊಲೀಸರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.