
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಾಣಿಲದ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ವ್ರತದ ಅಂಗವಾಗಿ ಆಯೋಜಿಸಲಾಗಿರುವ 48 ದಿನಗಳ (ಒಂದು ಮಂಡಲ) ಪವಿತ್ರ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಮಹೋತ್ಸವವು ಜುಲೈ 12ರಿಂದ ಶ್ರದ್ಧಾ-ಭಕ್ತಿಗಳಿಂದ ಜರುಗುತ್ತಿದೆ.
ಈ ಧಾರ್ಮಿಕ ಅನುಷ್ಠಾನದಲ್ಲಿ ನಿತ್ಯವೂ ನಾಡಿನ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ಧನ್ಯತೆ ಮೆರೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರತಿದಿನ ನಾಗದೇವರ ಪೂಜೆ, ಗೋಪೂಜೆ, ಬಾಲಭೋಜನ, ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಶ್ರೀ ದುರ್ಗಾಪೂಜೆ, ಆಶ್ಲೇಷ ಬಲಿ, ಮಹಾಪೂಜೆ ಹಾಗೂ ವಾಯನದಾನದೊಂದಿಗೆ ಮಹಾ ಅನ್ನಸಂತರ್ಪಣೆ ನೆರವೇರುತ್ತಿದೆ. ಕಳೆದ 26 ವರ್ಷಗಳಿಂದ ಶ್ರೀಧಾಮದಲ್ಲಿ ಈ ಪವಿತ್ರ ಪರಂಪರೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಪ್ರತಿ ಭಾನುವಾರ ವಿಶೇಷ ಪೂಜೆ ಹಾಗೂ ಧಾರ್ಮಿಕ ಸಭೆಗಳು ಜರುಗುತ್ತಿವೆ.
ಕುಟುಂಬ ಸಮೇತ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ:
ಮಂಡಲ ಪೂಜೆಯ 48 ದಿನಗಳಲ್ಲಿ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ಒಂದು ದಿನವನ್ನು ಕಾಯ್ದಿರಿಸಿಕೊಂಡು ಕುಟುಂಬ ಸಮೇತರಾಗಿ ಭಾಗವಹಿಸಲು ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಶ್ರೀ ಮಹಾಲಕ್ಷ್ಮಿ ಹಾಗೂ ಜಗದ್ಗುರು ನಿತ್ಯಾನಂದ ಸ್ವಾಮಿಗಳ ದಿವ್ಯ ಕೃಪೆಗೆ ಪಾತ್ರರಾಗಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದ್ದಾರೆ.
ಆಗಸ್ಟ್ 28ರಂದು ಮಹಾ ವರಮಹಾಲಕ್ಷ್ಮೀ ವ್ರತ:
ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಿ, ಸುಖ-ಶಾಂತಿ ಕರುಣಿಸುವ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯು ಆಗಸ್ಟ್ 28, 2026ರಂದು ಮಾಣಿಲ ಶ್ರೀಧಾಮದ ದಿವ್ಯ ಸಾನ್ನಿಧ್ಯದಲ್ಲಿ ವೈಭವದಿಂದ ನಡೆಯಲಿದೆ. ಈ ಮಹಾ ಪೂಜೆಯಲ್ಲಿ ಭಾಗವಹಿಸಿ ತಾಯಿಯ ಅನುಗ್ರಹ ಪಡೆಯುವಂತೆ ಕ್ಷೇತ್ರ ಸಮಿತಿ ಹಾಗೂ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.