ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಕಣಿಯೂರು ಗ್ರಾಮದ ಪೆರಡಾಳ ಸಮೀಪ ನದಿಯಲ್ಲಿ ಪತ್ತೆಯಾದ ಘಟನೆ ಆ.8 ರಂದು ನಡೆದಿದೆ.
ಕೊಯ್ಯೂರು ಗ್ರಾಮದ ಕೊಂಕದಡ್ಕ ನಿವಾಸಿ ಚಿದಾನಂದ ಅಲಿಯಾಸ್ ಉಮೇಶ್ ಗೌಡ (52) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಚಿಕ್ಕಮಗಳೂರು ಜಿಲ್ಲೆಯ ಆಲೂರಿನಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಗೌಡ ಅವರು ಆಗಸ್ಟ್ 5 ರಂದು ಅಲ್ಲಿಂದ ಸ್ವಗ್ರಾಮಕ್ಕೆ ಹೊರಟಿದ್ದರು. ಆದರೆ, ಅವರು ಮನೆಗೆ ತಲುಪಿರಲಿಲ್ಲ. ಕುಟುಂಬಸ್ಥರು ಹಾಗೂ ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಈ ನಡುವೆ ಆಗಸ್ಟ್ 8 ರಂದು ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ನದಿ ದಂಡೆಯ ಪೊದೆಯೊಂದರಲ್ಲಿ ಮೃತದೇಹ ಸಿಲುಕಿಕೊಂಡಿರುವುದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತರ ಪತ್ನಿ ಭವಾನಿ ಅವರು ಮೃತದೇಹವನ್ನು ಗುರುತಿಸಿದ್ದಾರೆ.
ವಿಪರೀತ ಮದ್ಯಪಾನದ ಚಟ ಹೊಂದಿದ್ದ ಉಮೇಶ್ ಗೌಡ ಅವರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿರಬಹುದು ಅಥವಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪತ್ನಿ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.