
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷವನ್ನು ಗ್ರಾಮ ಮತ್ತು ಬೂತ್ ಮಟ್ಟದಿಂದ ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 'ಸಂಘಟನಾ ಸೃಜನ್ ಅಭಿಯಾನ'ದ ಪ್ರಯುಕ್ತ ಬೆಳ್ತಂಗಡಿಯಲ್ಲಿ ಮಂಗಳವಾರ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, "ಕಾಂಗ್ರೆಸ್ ಸಂಘಟನೆಯ ನಿಜವಾದ ಶಕ್ತಿ ತಳಮಟ್ಟದ ಕಾರ್ಯಕರ್ತರಲ್ಲಿದೆ. ಅವರ ಅನುಭವ, ಸಲಹೆ ಮತ್ತು ಅಭಿಪ್ರಾಯಗಳನ್ನು ಪರಿಗಣಿಸಿ ಪಕ್ಷದ ಮುಂದಿನ ಕಾರ್ಯತಂತ್ರಗಳನ್ನು ರೂಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ" ಎಂದರು.
ಸಂಘಟನೆಯ ಸ್ವರೂಪದ ಕುರಿತು ವಿವರಿಸಿದ ಅವರು, "ಕಾಂಗ್ರೆಸ್ ಕೇವಲ ಚುನಾವಣೆ ವೇಳೆಯಲ್ಲಿ ಮಾತ್ರ ಸಕ್ರಿಯವಾಗುವ ಪಕ್ಷವಲ್ಲ; ಸದಾ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಜನಪರ ಚಳವಳಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ, ಬೂತ್ ಹಾಗೂ ಬ್ಲಾಕ್ ಮಟ್ಟದಿಂದ ಸಂಘಟನಾತ್ಮಕವಾಗಿ ಪಕ್ಷವನ್ನು ಮರುಸಂಘಟಿಸಬೇಕಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಸೇರಿದಂತೆ ಮುಖ್ಯ ಜವಾಬ್ದಾರಿಗಳನ್ನು ಹಂಚುವಾಗ ಕಾರ್ಯಕರ್ತರ ಧ್ವನಿಗೆ ಮೊದಲ ಆದ್ಯತೆ ನೀಡಲಾಗುವುದು" ಎಂದು ಸ್ಪಷ್ಟಪಡಿಸಿದರು.
ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ: ಎಐಸಿಸಿ ವೀಕ್ಷಕ ಕೆ. ಜಯಂತ್
ಎಐಸಿಸಿ ವೀಕ್ಷಕರಾಗಿ ಆಗಮಿಸಿದ್ದ ಕೇರಳದ ಕೋಝಿಕ್ಕೋಡ್ ಉತ್ತರ ಕ್ಷೇತ್ರದ ಶಾಸಕ ಕೆ. ಜಯಂತ್ ಮಾತನಾಡಿ, "ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನ ಅನಿಸಿಕೆಗೂ ಪಕ್ಷದಲ್ಲಿ ಗೌರವವಿದೆ. ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಜನರ ಧ್ವನಿಯಾಗಿ ಕೆಲಸ ಮಾಡುವುದೇ 'ಸಂಘಟನಾ ಸೃಜನ್ ಅಭಿಯಾನ'ದ ಮೂಲ ಆಶಯ" ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಟಣ, ಗ್ರಾಮೀಣ ಸಮಿತಿ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್ ಗೌಡ ಸೇರಿದಂತೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಪ್ರಮುಖ ನಾಯಕರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಿದರು.