ಮೂಡುಬಿದಿರೆ:ಕೌಟುಂಬಿಕ ಕಲಹ ಹಾಗೂ ಕಿರುಕುಳದಿಂದ ಬೇಸತ್ತ ಯುವಕನೊಬ್ಬ ತನ್ನ ಸಹೋದರಿಯೊಂದಿಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಣಿಲ್ ಎಂಬಲ್ಲಿ ಶುಕ್ರವಾರ (ಜುಲೈ 31) ಮುಂಜಾನೆ ಸಂಭವಿಸಿದೆ.
ಮೂಲತಃ ಬೆಳ್ತಂಗಡಿ ತಾಲೂಕಿನ ಕಾಜೂರು ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಸಯ್ಯದ್ ಅನ್ವರ್ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಘಟನೆಯ ಹಿನ್ನೆಲೆ:
ಮೀನಿನ ಟೆಂಪೋ ಚಾಲಕನಾಗಿ ವೃತ್ತಿ ಮಾಡುತ್ತಿದ್ದ ಸಯ್ಯದ್ ಅನ್ವರ್, ಕಳೆದ ಕೆಲವು ದಿನಗಳಿಂದ ಕೆಲಸವಿಲ್ಲದೆ ಮನೆಯಲ್ಲೇ ಉಳಿದುಕೊಂಡಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿಗೆ ಹೋಗಿ ವಾಪಸ್ ಬಂದಿದ್ದ ಸಯ್ಯದ್, ಬೆಳುವಾಯಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಮತ್ತು ಎರಡು ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದರು.
ಆದರೆ, ದಂಪತಿ ನಡುವೆ ಆಗಾಗ್ಗೆ ಮನಸ್ತಾಪ ಹಾಗೂ ಜಗಳಗಳು ನಡೆಯುತ್ತಿದ್ದವು. ಈ ವಿಚಾರವಾಗಿ ಹಿಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು-ಪ್ರತಿದೂರುಗಳೂ ದಾಖಲಾಗಿದ್ದವು ಎಂದು ಮೂಲಗಳು ತಿಳಿಸಿವೆ.
ವೀಡಿಯೋ ಕಾಲ್‌ನಲ್ಲಿ ನೋವು ತೋಡಿಕೊಂಡಿದ್ದ ಯುವಕ:
ಗುರುವಾರ ಮತ್ತೆ ದಂಪತಿ ನಡುವೆ ತೀವ್ರ ಸ್ವರೂಪದ ಜಗಳ ನಡೆದಿದ್ದು, ಕೋಪಗೊಂಡ ಪತ್ನಿ ಮಗುವಿನೊಂದಿಗೆ ತನ್ನ ತವರು ಮನೆಗೆ ತೆರಳಿದ್ದರು. ಇದರಿಂದ ತೀವ್ರ ಮನನೊಂದಿದ್ದ ಸಯ್ಯದ್ ಅನ್ವರ್, ಶುಕ್ರವಾರ ಮುಂಜಾನೆ ತನ್ನ ಅಕ್ಕನಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ, 'ಪತ್ನಿ ಹಾಗೂ ಅವರ ಮನೆಯವರ ಕಿರುಕುಳ ತಾಳಲಾರದೆ ನಾನು ಜೀವ ಕಳೆದುಕೊಳ್ಳುತ್ತಿದ್ದೇನೆ' ಎಂದು ಅಳಲು ತೋಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದರಿಂದ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಬೆಳುವಾಯಿಯ ಬಾಡಿಗೆ ಮನೆಗೆ ಧಾವಿಸಿ ಬಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸಯ್ಯದ್ ಅನ್ವರ್ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದರು.
ಘಟನಾ ಸ್ಥಳಕ್ಕೆ ಮೂಡುಬಿದಿರೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
