ದಕ್ಷಿಣ ಕನ್ನಡ

ಬೆಳ್ತಂಗಡಿ: ಮುಚ್ಚಿರಡ್ಕದಲ್ಲಿ ಕಾಡಾನೆ ಭೀಕರ ದಾಳಿಗೆ ವ್ಯಕ್ತಿ ಬಲಿ

 


ಬೆಳ್ತಂಗಡಿ/ನೆಲ್ಯಾಡಿ:

ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಕಾಡಾನೆಯೊಂದು ಭೀಕರ ದಾಳಿ ನಡೆಸಿದ್ದು, ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರಂತ ಘಟನೆ ಶನಿವಾರ ಸಂಜೆ ನಡೆದಿದೆ.

​ಇಡ್ಯಾಲು ನಿವಾಸಿ ಬಾಲಕೃಷ್ಣ ಗೌಡ (55) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಸಂಜೆ ಮನೆಗೆ ಮರಳುವಾಗ ದುರಂತ:

ದೈನಂದಿನ ಕೆಲಸ ಮುಗಿಸಿಕೊಂಡು ಸಂಜೆ ವೇಳೆಗೆ ಮನೆಗೆ ಕಾಲ್ನಡಿಗೆಯಲ್ಲಿ ವಾಪಸಾಗುತ್ತಿದ್ದ ವೇಳೆ ಬಾಲಕೃಷ್ಣ ಗೌಡ ಅವರ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿಯಾದರೂ ಅವರು ಮನೆಗೆ ತಲುಪದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದರು.

ಕಣಿವೆಯಲ್ಲಿ ಪತ್ತೆಯಾದ ಮೃತದೇಹ:

ಹುಡುಕಾಟದ ಹಾದಿಯಲ್ಲಿ ಬಾಲಕೃಷ್ಣ ಗೌಡ ಅವರು ಧರಿಸಿದ್ದರೆನ್ನಲಾದ ಪ್ಲಾಸ್ಟಿಕ್ ರೈನ್‌ಕೋಟ್ ಪತ್ತೆಯಾಗಿದೆ. ಅದರ ಪಕ್ಕದಲ್ಲೇ ಕಾಡಾನೆಯ ಸ್ಪಷ್ಟ ಹೆಜ್ಜೆಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಕಾಡಾನೆ ದಾಳಿಯ ಶಂಕೆ ವ್ಯಕ್ತವಾಗಿತ್ತು. ಮತ್ತಷ್ಟು ತೀವ್ರ ಹುಡುಕಾಟ ನಡೆಸಿದಾಗ, ಸಮೀಪದ ಕಣಿವೆಯೊಂದರಲ್ಲಿ ಅವರ ಮೃತದೇಹ ಧಾರುಣ ಸ್ಥಿತಿಯಲ್ಲಿ ಪತ್ತೆಯಾಗಿದೆ.

​ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



image