ಬೆಳ್ತಂಗಡಿ: ತಾಲೂಕಿನಲ್ಲಿ ಅಕ್ರಮ ಮಾದಕ ವಸ್ತು (ಡ್ರಗ್ಸ್) ಸೇವನೆ ಹಾಗೂ ಮಾರಾಟ ಜಾಲದ ವಿರುದ್ಧ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ನಿವಾಸಿ ಕೆ.ಹೆಚ್. ಅಬ್ದುಲ್ ಹಮೀದ್ ಎಂಬವರ ಮಗ ಮಹಮ್ಮದ್ ನೌಶಾದ್ (29) ಬಂಧಿತ ಆರೋಪಿ. ಈತನ ಸಹೋದರರಾದ ಮಾದಕವಸ್ತು ಸಾಗಾಟದ ಹಿನ್ನೆಲೆ ಹೊಂದಿರುವ ಹಮ್ಮತ್ ಖರಾರ್, ಲತೀಫ್ ಹಾಗೂ ಸಿದ್ದೀಕ್ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಆಗಸ್ಟ್ 3ರಂದು ಸಂಜೆ ಸುಮಾರು 6:45ರ ವೇಳೆಗೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಸಿಕಂದರ್ ಪಾಷಾ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಕಸಬಾ ಗ್ರಾಮದ ಜೈನ್ ಪೇಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ 'KA-70-9065' ನೋಂದಣಿ ಸಂಖ್ಯೆಯ ಆಟೋ ರಿಕ್ಷಾವನ್ನು ಪೊಲೀಸರು ತಪಾಸಣೆ ನಡೆಸಿದರು. ಆ ಸಂದರ್ಭದಲ್ಲಿ ಆಟೋದಲ್ಲಿದ್ದ ಮಹಮ್ಮದ್ ನೌಶಾದ್ ಅತಿಯಾದ ಮಾದಕ ದ್ರವ್ಯದ ಅಮಲಿನಲ್ಲಿರುವುದು ಕಂಡುಬಂದಿದೆ.
ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಮಾದಕ ಜಾಲದ ಪ್ರಮುಖ ಮಾಹಿತಿ ಹೊರಬಿದ್ದಿದೆ. ತನ್ನ ಸಹೋದರರಾದ ಹಮ್ಮತ್ ಖರಾರ್, ಲತೀಫ್ ಮತ್ತು ಸಿದ್ದೀಕ್ ಅವರು ಡ್ರಗ್ಸ್ ಅನ್ನು ತಲಾ 1 ಗ್ರಾಂ ನಂತೆ ಸಣ್ಣ ಪ್ಯಾಕೆಟ್‌ಗಳಲ್ಲಿ ನೀಡಿ, ಪ್ರತಿ ಗ್ರಾಂಗೆ 2,000 ರೂಪಾಯಿಯಂತೆ ಮಾರಾಟ ಮಾಡಲು ನೀಡುತ್ತಿದ್ದರೆಂದು ತಿಳಿಸಿದ್ದಾನೆ. ಆಟೋ ರಿಕ್ಷಾದ ಮೂಲಕ ಗ್ರಾಹಕರಿಗೆ ಇದನ್ನು ತಲುಪಿಸಲಾಗುತ್ತಿತ್ತು ಹಾಗೂ ತಾನು ಕೂಡ ಅಂದು ಮಾದಕ ವಸ್ತು ಸೇವಿಸಿದ್ದಾಗಿ ನೌಶಾದ್ ಒಪ್ಪಿಕೊಂಡಿದ್ದಾನೆ.
ವೈದ್ಯಕೀಯ ತಪಾಸಣೆಯಲ್ಲಿ ದೃಢ:
ಬಂಧಿತ ಆರೋಪಿ ನೌಶಾದ್‌ನನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆತ THC (ಗಾಂಜಾ) ಹಾಗೂ AMP (ಆಂಫಿಟಮೈನ್) ನಂತಹ ಅಪಾಯಕಾರಿ ಮಾದಕ ದ್ರವ್ಯ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವನೆ ಮತ್ತು ಮಾರಾಟ ಆರೋಪದಡಿ ನಾಲ್ವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಯದ ವಾರಂಟ್; ಆರೋಪಿ ಬಂಧನ:
ಆರೋಪಿ ಮಹಮ್ಮದ್ ನೌಶಾದ್ ವಿರುದ್ಧ 2026ರ ಜನವರಿ 3ರಂದು ಕುವೆಟ್ಟು ಗ್ರಾಮದಲ್ಲಿ ನಡೆದಿರುವ ಎಂಡಿಎಂಎ (MDMA) ಮಾದಕವಸ್ತು ಮಾರಾಟ ಮತ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಆತನ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿತ್ತು.
ಪ್ರಸ್ತುತ ವಾರಂಟ್ ಆಧಾರದಲ್ಲಿ ನೌಶಾದ್‌ನನ್ನು ಬಂಧಿಸಿರುವ ಪೊಲೀಸರು, ಆಗಸ್ಟ್ 4ರಂದು ಆತನನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
