ಉಳ್ಳಾಲ: ದೀರ್ಘಕಾಲದ ಅನಾರೋಗ್ಯ ಹಾಗೂ ಜ್ವರದಿಂದ ಬಳಲುತ್ತಿದ್ದ ಅವಿವಾಹಿತ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರು ಸರಕಾರಿ ಶಾಲೆ ಸಮೀಪ ನಡೆದಿದೆ.
ಕೋಟೇಕಾರು ಪಟ್ಟಣದ ಕೊಂಡಾಣ ಮಿತ್ರನಗರ ಮೂಲದ ನಿತಿನ್ ಕುಮಾರ್ ಅಲಿಯಾಸ್ ನೀತು (35) ಮೃತಪಟ್ಟ ಯುವಕ.
ತೊಕ್ಕೊಟ್ಟು ಕಾಪಿಕಾಡಿನ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ನಿತಿನ್, ಪಿಲಾರುವಿನಲ್ಲಿರುವ ತಮ್ಮ ಭಾವ ಲಕ್ಷ್ಮಣ ಪಕ್ಕಳ ಅವರ ಮನೆಯಲ್ಲಿ ವಾಸವಿದ್ದರು. ಇವರು ಕಳೆದ ಎರಡು ವರ್ಷಗಳಿಂದ ವೆರಿಕೋಸ್ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ತೀವ್ರ ಜ್ವರದಿಂದಾಗಿ ಮನೆಯಲ್ಲೇ ಉಳಿದುಕೊಂಡಿದ್ದರು.
ಮಂಗಳವಾರ ರಾತ್ರಿ ಊಟ ಮುಗಿಸಿ ತಮ್ಮ ಕೋಣೆಗೆ ತೆರಳಿದ್ದ ನಿತಿನ್, ಬಳಿಕ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
