ರಾಜ್ಯ

ಕೊಟ್ಟಿಗೆಹಾರ ಸಮೀಪ ಭೀಕರ ರಸ್ತೆ ಅಪಘಾತ: ಲಾರಿಗೆ ಕಾರು ಡಿಕ್ಕಿ ಹೊಡೆದು ತುಮಕೂರಿನ ಮೂವರು ಯುವಕರು ದಾರುಣ ಸಾವು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಸಿಲಿಂಡರ್ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಈ ದುರ್ಘಟನೆ ಸಂಭವಿಸಿದೆ.

ತುಮಕೂರು ಮೂಲದ ಗುರುಕಿರಣ್ (28), ಮೋಹನ್ (30) ಹಾಗೂ ಜ್ಞಾನೇಶ್ (28) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಪ್ರೇಮ್ ಕುಮಾರ್ ಹಾಗೂ ಹೃತಿಕ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಧರ್ಮಸ್ಥಳ ಪ್ರವಾಸದಲ್ಲಿದ್ದಾಗ ಎದುರಾಯ್ತು ಕಂಟಕ:

ಮೃತಪಟ್ಟ ಯುವಕರೆಲ್ಲರೂ ತುಮಕೂರು ಜಿಲ್ಲೆಯವರಾಗಿದ್ದು, ಗೆಳೆಯರೊಂದಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿಗೆ ಇವರ ಕಾರು ಬಲವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬಣಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



image