ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲಿನ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಅಧಿಕಾರಿಗಳ ಮಿಂಚಿನ ದಾಳಿ ವೇಳೆ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ಕಾರಾಗೃಹದ ಭದ್ರತಾ ವ್ಯವಸ್ಥೆಯ ಲೋಪವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಹಾಗೂ ಡಿಸಿಪಿಗಳಾದ ಶ್ರೀಹರಿಬಾಬು ಮತ್ತು ರಾಜಾ ಇಮಾಮ್ ಕಾಸಿಂ ಅವರ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದ ತಂಡವು ಮಂಗಳವಾರ ಇಡೀ ದಿನ ಕಾರಾಗೃಹ ಸಂಕೀರ್ಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪ್ರಜ್ವಲ್ ರೇವಣ್ಣ ಅವರಿದ್ದ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಜಪ್ತಿಯಾಗಿದೆ.
ತನಿಖೆಗೆ ಇಲಾಖೆ ಮುಂದು:
ಅತಿ ಹೆಚ್ಚು ಭದ್ರತೆ ಇರುವ ಬ್ಯಾರಕ್‌ಗೆ ಮೊಬೈಲ್ ಫೋನ್ ತಲುಪಿದ್ದು ಹೇಗೆ? ಇದರ ಹಿಂದೆ ಯಾರ ಹಸ್ತಕ್ಷೇಪವಿದೆ ಹಾಗೂ ಎಷ್ಟು ದಿನಗಳಿಂದ ಇದನ್ನು ಬಳಸಲಾಗುತ್ತಿತ್ತು ಎಂಬ ಕುರಿತು ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಈ ಸಂಬಂಧ ನಿಯಮಗಳ ಉಲ್ಲಂಘನೆಯಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲು ಸಿದ್ಧತೆ ನಡೆಸಲಾಗಿದೆ.
ಇದೇ ದಾಳಿಯ ಸಮಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ಬ್ಯಾರಕ್‌ಗಳನ್ನೂ ಸಿಸಿಬಿ ಪರಿಶೀಲಿಸಿತಾದರೂ, ಅಲ್ಲಿ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. high-profile ಕೈದಿಯ ಬ್ಯಾರಕ್‌ನಲ್ಲಿ ಮೊಬೈಲ್ ಸಿಕ್ಕಿರುವುದು ಜೈಲು ಸಿಬ್ಬಂದಿಗೆ ಬಿಗ್ ಶಾಕ್ ನೀಡಿದೆ.
