ದಕ್ಷಿಣ ಕನ್ನಡ

ಕಿನ್ನಿಗೋಳಿ : ಅಯೋಧ್ಯೆ ರಾಮಮಂದಿರ ಹುಂಡಿ ಕಳವು ಖಂಡಿಸಿ ಕಿನ್ನಿಗೋಳಿಯಲ್ಲಿ ಕಾಂಗ್ರೆಸ್ ಬೃಹತ್ ಪಂಜಿನ ಮೆರವಣಿಗೆ

 


ಕಿನ್ನಿಗೋಳಿ:ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕಳವು ಪ್ರಕರಣವನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಿನ್ನಿಗೋಳಿಯಲ್ಲಿ ಬೃಹತ್ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಿತು.

​ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪ್ರಚಾರ ಸಮಿತಿಯ ನೇತೃತ್ವದಲ್ಲಿ, ಮುಲ್ಕಿ ಹಾಗೂ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಸಹಯೋಗದೊಂದಿಗೆ ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಂಜು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

​ಧಾರ್ಮಿಕ ಭಾವನೆಗೆ ದ್ರೋಹ ಎಸಗಿದ ಬಿಜೆಪಿ: ಲಕ್ಷ್ಮೀಶ ಗಬ್ಬಲಡ್ಕ

​ಪ್ರತಿಭಟನಾ ಸಭೆಯಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ, "ಶ್ರೀರಾಮನ ಹೆಸರಿನಲ್ಲಿ ನಿರಂತರವಾಗಿ ರಾಜಕೀಯ ಮಾಡುತ್ತಾ ಬಂದಿರುವ ಬಿಜೆಪಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಮಹಾದ್ರೋಹ ಎಸಗಿದೆ. ಇದಕ್ಕೆ ಸಾಕ್ಷಾತ್ ಶ್ರೀರಾಮನೇ ತಕ್ಕ ಉತ್ತರ ನೀಡಲಿದ್ದಾನೆ. ಸುಮಾರು 13 ಕೋಟಿ ಬಾರಿ ರಾಮಜಪ ಮಾಡಿದ್ದ ಮಹಾತ್ಮಾ ಗಾಂಧೀಜಿಯವರನ್ನೇ ಅವಹೇಳನ ಮಾಡುವ ಬಿಜೆಪಿ ನಾಯಕರು, ಈಗ ಅಯೋಧ್ಯೆ ಮಂದಿರದ ಹುಂಡಿ ಹಣ ಕಳ್ಳತನದಂತಹ ಮಹಾಪರಾಧ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ," ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.

​ಬಿಜೆಪಿಯದ್ದು ನಕಲಿ ಹಿಂದುತ್ವ: ಮಿಥುನ್ ರೈ ಆಕ್ರೋಶ

​ಇದೇ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, "ಕೋಟ್ಯಂತರ ಹಿಂದೂಗಳ ಶ್ರದ್ಧೆ ಮತ್ತು ನಂಬಿಕೆಗೆ ಕಪ್ಪುಚುಕ್ಕೆ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕೇವಲ ಚುನಾವಣೆ ಬಂದಾಗಷ್ಟೇ ಹಿಂದುತ್ವದ ಜಪ ಮಾಡುವ ಬಿಜೆಪಿಯವರು, ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಲೂಟಿಯಾಗುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಪ್ರಧಾನಮಂತ್ರಿಗಳಾಗಲಿ ಅಥವಾ ಗೃಹ ಸಚಿವರಾಗಲಿ ಈ ಬಗ್ಗೆ ತುರ್ತು ಚಕಾರ ಎತ್ತದಿರುವುದು ಅವರ 'ನಕಲಿ ಹಿಂದುತ್ವ'ವನ್ನು ಬಯಲು ಮಾಡಿದೆ. ಈ ಹೋರಾಟವನ್ನು ಇಲ್ಲೇ ಕೈಬಿಡುವುದಿಲ್ಲ, ಪ್ರತಿಯೊಂದು ಮನೆ ಮನೆಗೂ ತೆರಳಿ ಬಿಜೆಪಿಯ ನೈಜ ಮುಖವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ," ಎಂದು ಎಚ್ಚರಿಸಿದರು.


ಭಕ್ತರ ಶ್ರದ್ಧೆಗೆ ಎಸಗಿದ ಅಪಮಾನ: ವಿನಯ್ ಕುಮಾರ್ ಸೊರಕೆ

​ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, "ರಾಮಭಕ್ತರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ನೀಡಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಅಯೋಧ್ಯೆಯ ಹುಂಡಿಯಿಂದ ಗಾಯಬ್ ಆಗಿದೆ. ಇದು ಕೇವಲ ಹಣದ ಕಳ್ಳತನವಲ್ಲ, ದೇಶದ ಪ್ರತಿಯೊಬ್ಬ ರಾಮಭಕ್ತನ ನಂಬಿಕೆಗೆ ಎಸಗಿದ ಅಪಮಾನ. ಭಕ್ತರ ಹಣ ನುಂಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು," ಎಂದು ಆಗ್ರಹಿಸಿದರು.

​ಪ್ರಮುಖ ನಾಯಕರ ಉಪಸ್ಥಿತಿ

​ಈ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮೋಹನ್ ಕೋಟ್ಯಾನ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್‌ನ ಪ್ರಮುಖ ಜನಪ್ರತಿನಿಧಿಗಳು ಹಾಗೂ ನಾಯಕರು ಭಾಗವಹಿಸಿದ್ದರು.



image