ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಗೆ ಧಕ್ಕೆ ತರುತ್ತಿದ್ದ ವಾಹನ ಸವಾರರಿಗೆ ಮಂಗಳೂರು ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿ ವಾಹನ ಪಾರ್ಕಿಂಗ್ ಮಾಡುತ್ತಿದ್ದವರ ವಿರುದ್ಧ ಸಮರ ಸಾರಿರುವ ಪೊಲೀಸರು, ಬೃಹತ್ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
7.5 ಸಾವಿರಕ್ಕೂ ಹೆಚ್ಚು ಕೇಸ್ ದಾಖಲು!
ಕಳೆದ ಜೂನ್ ತಿಂಗಳಿನಿಂದ ಈವರೆಗೆ ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಿದ್ದು, ನೋ ಪಾರ್ಕಿಂಗ್ (No Parking), ಫುಟ್‌ಪಾತ್ ಪಾರ್ಕಿಂಗ್, ಡಬಲ್ ಪಾರ್ಕಿಂಗ್ ಹಾಗೂ ಸಂಚಾರಕ್ಕೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ವಾಹನ ನಿಲ್ಲಿಸಿದ್ದ 7,490 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಉಲ್ಲಂಘನೆಗಳಿಂದ ಒಟ್ಟು ₹3,07,600 ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಕೇವಲ ಫುಟ್‌ಪಾತ್‌ನಲ್ಲಿ ವಾಹನ ಪಾರ್ಕ್ ಮಾಡಿದ್ದಕ್ಕೇ 1,080 ಪ್ರಕರಣಗಳು ದಾಖಲಾಗಿರುವುದು ವಿಶೇಷ.
ನಂಬರ್ ಪ್ಲೇಟ್ ಗೊಂದಲ: 332 ವಾಹನಗಳಿಗೆ ಬಿತ್ತು ದಂಡದ ಬರೆ
ಮತ್ತೊಂದೆಡೆ, ನಗರದಲ್ಲಿ ಹೆಚ್‌ಎಸ್‌ಆರ್‌ಪಿ (HSRP) ನಿಯಮ ಪಾಲಿಸದೆ ನಕಲಿ, ದೋಷಪೂರಿತ ಅಥವಾ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳ ತಪಾಸಣೆಗೆ ಆಯಾಗಸ್ಟ್ 4 ರಿಂದ 12 ರವರೆಗೆ ವಿಶೇಷ ಡ್ರೈವ್ ನಡೆಸಲಾಗಿತ್ತು.
- ದೋಷಪೂರಿತ ನಂಬರ್ ಪ್ಲೇಟ್: 258 ವಾಹನಗಳ ವಿರುದ್ಧ ಪ್ರಕರಣ.
- ನಂಬರ್ ಪ್ಲೇಟ್ ಇಲ್ಲದ ವಾಹನಗಳು: 74 ವಾಹನಗಳ ವಿರುದ್ಧ ಪ್ರಕರಣ.
- ಒಟ್ಟು ದಂಡ: 332 ಪ್ರಕರಣಗಳಿಂದ ₹3,01,000 ದಂಡ ವಿಧಿಸಲಾಗಿದೆ.
ಪೊಲೀಸ್ ಕಮಿಷನರ್ ಸೂಚನೆ:
"ವಾಹನಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಸ್ಪಷ್ಟವಾಗಿ ಕಾಣಿಸುವ HSRP ನಂಬರ್ ಪ್ಲೇಟ್ ಅಳವಡಿಸುವುದು ಪ್ರತಿಯೊಬ್ಬ ವಾಹನ ಮಾಲೀಕರ ಜವಾಬ್ದಾರಿಯಾಗಿದೆ. ಮುಂಬರುವ ದಿನಗಳಲ್ಲೂ ಈ ಸ್ಪೆಷಲ್ ಡ್ರೈವ್ ಮುಂದುವರಿಯಲಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕು" ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
