
ಕರಿಮಣೇಲು: ಇಲ್ಲಿನ ಖ್ಯಾತ ಬ್ರೈಟ್ ಹೊರೈಝನ್ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ನೈಜ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದ ಡಾ. ಶಾಂತಿಪ್ರಸಾದ್ ಅವರು ಮಾತನಾಡಿ, "ನಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ತೃಣಸಮಾನವಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ಪವಿತ್ರ ದಿನ ಇದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಮತ್ತು ತ್ಯಾಗವನ್ನು ಪ್ರತಿಯೊಬ್ಬ ನಾಗರಿಕನೂ ಸದಾ ಗೌರವಿಸಬೇಕು," ಎಂದು ಕರೆ ನೀಡಿದರು.
ಇದೇ ವೇಳೆ ಸಂಸ್ಥೆಯ ಟ್ರಸ್ಟಿ ರಂಜಿತ್ ಪೂಜಾರಿ ತೋಡಾರ್ ಮಾತನಾಡಿ, "ಯುವಜನತೆಯೇ ಈ ದೇಶದ ಅಸಲಿ ಶಕ್ತಿ. ಮಕ್ಕಳು ಕೇವಲ ಶೈಕ್ಷಣಿಕ ಅಂಕಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಮಾದರಿಯಾಗುವ ಉತ್ತಮ ನಾಗರಿಕರಾಗಿ ಬೆಳೆಯಬೇಕು. ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವುದೇ ಬೈಟ್ ಹೊರೈಝನ್ ಸಂಸ್ಥೆಯ ಪ್ರಮುಖ ಧ್ಯೇಯ," ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ಶರತ್ ಗೋರೆ ಅವರು ಮಾತನಾಡಿ, "ದೇಶಭಕ್ತಿಯ ಅಡಿಪಾಯ ಶಾಲಾ ಹಂತದಲ್ಲೇ ನಿರ್ಮಾಣವಾಗಬೇಕು. ನಮ್ಮ ಸಂಸ್ಥೆಯಲ್ಲಿ ವಿವಿಧ ಜಿಲ್ಲೆ ಹಾಗೂ ವೈವಿಧ್ಯಮಯ ಧರ್ಮಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ಶಿಕ್ಷಣ ಪಡೆಯುತ್ತಿದ್ದು, ಇದು ನಿಜವಾದ 'ಮಿನಿ ಇಂಡಿಯಾ'ದಂತೆ ಕಂಗೊಳಿಸುತ್ತಿದೆ. ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮರ ಆದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು," ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶಾಂಭವಿ ಗೋರೆ ಅವರು ಸ್ವಾತಂತ್ರ್ಯದ ಪ್ರಾಮುಖ್ಯತೆ ಹಾಗೂ ಹೋರಾಟಗಾರರ ಕೊಡುಗೆಯ ಕುರಿತು ಪ್ರೇರಣಾದಾಯಿ ಮಾತುಗಳನ್ನಾಡಿದರು.
ಮನಸೂರೆಗೊಂಡ ಸಾಂಸ್ಕೃತಿಕ ಕಲಾಪ್ರದರ್ಶನ:
ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ರೋಮಾಂಚನಕಾರಿ ಕರಾಟೆ ಪ್ರದರ್ಶನ ಹಾಗೂ ದೇಶಭಕ್ತಿ ಸಾರುವ ಭಾಷಣಗಳು ಜರುಗಿದವು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಗಿಸಿದ ದೇಶಭಕ್ತಿ ಗೀತೆಗಳ ಗಾಯನವು ನೆರೆದಿದ್ದ ಪೋಷಕರು ಹಾಗೂ ಸಾರ್ವಜನಿಕರಲ್ಲಿ ದೇಶಪ್ರೇಮದ ಭಾವನೆ ಜಾಗೃತಗೊಳಿಸಿತು.
ಈ ಶುಭ ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಶಶಿಧರ್, ಶೈಕ್ಷಣಿಕ ಮುಖ್ಯಸ್ಥೆ ಜೇಸಿಂಥ ಡಿ ಕುನ್ನಾ, ಕ್ಯಾಂಪಸ್ ಹೆಡ್ ಪ್ರಖ್ಯಾತ್ ಭಂಡಾರಿ, ಪ್ರಮುಖರಾದ ಸಾರಿಕ ಪೂಜಾರಿ, ದಾಮೋದರ ಪೂಜಾರಿ, ನಾಗೇಶ್ ಬಂಗೇರ, ರವೀಂದ್ರ ಶೆಟ್ಟಿ ಸೇರಿದಂತೆ ಹಲವು ಗಣ್ಯರು, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
