ಮಂಗಳೂರು: "ಜನಸೇವೆಯೇ ಜನಾರ್ದನ ಸೇವೆ" ಎಂಬ ಉದಾತ್ತ ಧ್ವೇಯವಾಕ್ಯದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ 'ತತ್ವಮಸಿ ಬ್ರಿಗೇಡ್ ಮಂಗಳೂರು' ಸಂಸ್ಥೆಯು ತನ್ನ 8ನೇ ಯೋಜನೆಯ ಭಾಗವಾಗಿ, ಬೆಳ್ಮ–ದೇರಳಕಟ್ಟೆಯ ಸೇವಾಶ್ರಮದಲ್ಲಿ ನಿರಾಶ್ರಿತ ಹಿರಿಯ ನಾಗರಿಕರೊಂದಿಗೆ "ಸೇವಾಶ್ರಮಡ್ ಆಟಿಡೊಂಜಿ ದಿನ" ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು.
ಆಶ್ರಮದ ಹಿರಿಯ ಜೀವಗಳೊಂದಿಗೆ ಆತ್ಮೀಯವಾಗಿ ಬೆರೆತು, ಅವರಿಗೆ ಸಂತಸ ಹಾಗೂ ಪ್ರೀತಿಯನ್ನು ಹಂಚುವ ಮೂಲಕ ಈ ಬಾರಿಯ ಆಟಿ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸೇವಾಭಾವ ಚಾರಿಟೇಬಲ್ ಟ್ರಸ್ಟ್ (ರಿ.) ಸೇವಾಶ್ರಮದ ಸ್ಥಾಪಕರಾದ ಗೀತಾ ಆರ್. ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತತ್ವಮಸಿ ಬ್ರಿಗೇಡ್ ಮಂಗಳೂರು ಸಂಸ್ಥೆಯ ಸ್ಥಾಪಕರಾದ ಭರತ್ ಬಲ್ಲಾಳ್ ಬಾಗ್, ಎನ್‌ಎಸ್‌ಯುಐ (NSUI) ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ರಕ್ಷಿತಾ ಅವರು ನಡೆಸಿಕೊಟ್ಟರು. ತತ್ವಮಸಿ ಬ್ರಿಗೇಡ್‌ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ಹಿರಿಯರ ಸೇವೆಗೆ ಕೈಜೋಡಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಆಶ್ರಮದ ವೃದ್ಧರ ಮುಖದಲ್ಲಿ ಮೂಡಿದ ನಗು ಹಾಗೂ ಸಂತಸವೇ ನಮ್ಮ ಈ ಸೇವಾ ಕಾರ್ಯಕ್ಕೆ ಸಿಕ್ಕ ನಿಜವಾದ ಸಾರ್ಥಕತೆ ಎಂದು ಸಂಘಟಕರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು.


