ದಕ್ಷಿಣ ಕನ್ನಡ

ಉಪ್ಪಿನಂಗಡಿ: ಸರಕಾರಿ ಪಿಯು ಕಾಲೇಜಿನಲ್ಲಿ ಮಹಿಳಾ ಹಾಗೂ ಮಕ್ಕಳ ಸುರಕ್ಷತಾ ಜಾಗೃತಿ ಕಾರ್ಯಕ್ರಮ



ಉಪ್ಪಿನಂಗಡಿ: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆ ಆಗಸ್ಟ್ 18ರ ಮಂಗಳವಾರದಂದು ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

​ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಪ್ಪಿನಂಗಡಿ ಪೊಲೀಸ್ ಅಧಿಕಾರಿ ಸುತೇಶ್ ಕೆ. ಪಿ. ಮಾತನಾಡಿ, ಪೋಕ್ಸೋ (POCSO) ಕಾಯ್ದೆಯ ನಿಬಂಧನೆಗಳು, ಕಾಯ್ದೆಯಡಿ ಸಿಗುವ ಶಿಕ್ಷೆ ಹಾಗೂ ದೈಹಿಕ-ಮಾನಸಿಕ ದೌರ್ಜನ್ಯ ತಡೆಯುವ ವಿಧಾನಗಳ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳು ಇಂದಿನ ಸೈಬರ್ ಕಾಲಘಟ್ಟದಲ್ಲಿ ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಮತ್ತು ಎಚ್ಚರಿಕೆಯಿಂದ ಬಳಸಬೇಕು ಎಂದು ಕಿವಿಮಾತು ಹೇಳಿದರು.

​


ಮತ್ತೋರ್ವ ಸಂಪನ್ಮೂಲ ವ್ಯಕ್ತಿ, ಪುತ್ತೂರು ಮಹಿಳಾ ಪೊಲೀಸ್ ಠಾಣೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ‘ಅಕ್ಕ ಪಡೆ’ಯ ಸಿಬ್ಬಂದಿ ಸುಖಿತಾ ಶೆಟ್ಟಿ ಮಾತನಾಡಿ, ಮಾದಕ ದ್ರವ್ಯ (ಡ್ರಗ್ಸ್) ಸೇವನೆಯಿಂದ ಯುವಜನತೆಯ ಮೇಲಾಗುವ ದುಷ್ಪರಿಣಾಮಗಳು ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಎದುರಾಗುವ ಆಪತ್ತುಗಳ ಕುರಿತು ಉದಾಹರಣೆ ಸಹಿತ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

​ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ (CDC) ಕಾರ್ಯಾಧ್ಯಕ್ಷರಾದ ಅಜೀಜ್ ಬಸ್ತಿಕರ್ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ಮಾತನಾಡಿದರು.

​ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ರೇಖಾ ಎಂ., ಪುತ್ತೂರು ಮಹಿಳಾ ಠಾಣೆಯ ಅಕ್ಕ ಪಡೆ ಸಿಬ್ಬಂದಿ ಭವ್ಯ, ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

​


ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಇಬ್ರಾಹಿಂ ಎಂ. ಸರ್ವರನ್ನೂ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಕುಮಾರಿ ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.












image