ಉಳ್ಳಾಲ: ವಿದ್ಯುತ್ ದೋಷ ಸರಿಪಡಿಸುವ ಕಾಯಕದಲ್ಲಿದ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾಗಿ ಜೀವ ಕಳೆದುಕೊಂಡ ಭೀಕರ ದುರಂತವೊಂದು ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಣದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.
ಅಂಬಿಕಾರೋಡ್ ಪಿಲಾರು ಪ್ರದೇಶದ ನಿವಾಸಿಯಾಗಿದ್ದ ಮೆಸ್ಕಾಂ ಲೈನ್‌ಮ್ಯಾನ್ ಶೇಖ್ ಝಮೀರ್ (49) ಮೃತಪಟ್ಟ ದುರ್ದೈವಿ. ಅಗಲಿದ ಶೇಖ್ ಝಮೀರ್ ಅವರು ಪತ್ನಿ ಹಾಗೂ ಹೆಣ್ಣು ಮಗಳನ್ನು ಅಗಲಿದ್ದಾರೆ.
ಘಟನೆಯ ವಿವರ:
ಉಚ್ಚಿಲ ನಯಾಪಟ್ಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಶೇಖ್ ಝಮೀರ್ ತಮ್ಮ ಸಹೋದ್ಯೋಗಿ ಸಂಗಪ್ಪ ಅವರೊಂದಿಗೆ ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದರು.
ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವ ಗ್ಯಾಂಗ್ ಆಪರೇಟೆಡ್ ಸ್ವಿಚ್ (GOS) ಆಫ್ ಆಗಿದೆ ಎಂದು ಭಾವಿಸಿ ಝಮೀರ್ ಅವರು ಟ್ರಾನ್ಸ್‌ಫಾರ್ಮರ್ ಏರಿದ್ದಾರೆ. ಆದರೆ, ಆ ವೇಳೆಗೆ ವಿದ್ಯುತ್ ಪ್ರವಾಹ ಸಂಪೂರ್ಣ ಸ್ಥಗಿತಗೊಳ್ಳದ ಕಾರಣ, ತೀವ್ರ ಸ್ವರೂಪದ ಶಾಕ್ ಹೊಡೆದು ಅವರು ಮೇಲಿಂದ ಕೆಳಗೆ ಬಿದ್ದಿದ್ದಾರೆ.
ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರು:
ಆಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
