ಅರಸಿನಮಕ್ಕಿ: ಇಲ್ಲಿನ ಅರಸಿನಮಕ್ಕಿ-ಬೂಡುಮುಗೇರು ರಸ್ತೆಯು ತೀವ್ರವಾಗಿ ಹಾನಿಗೊಳಗಾಗಿದ್ದು, ಹಲವೆಡೆ ದೊಡ್ಡ ಹೊಂಡಗಳು ನಿರ್ಮಾಣಗೊಂಡು ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಪರದಾಡುವಂತಾಗಿತ್ತು. ಸಾರ್ವಜನಿಕರ ಈ ಸಮಸ್ಯೆಗೆ ಸ್ಪಂದಿಸಿದ ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಯುವಕರ ತಂಡವೊಂದು ಶ್ರಮದಾನದ ಮೂಲಕ ರಸ್ತೆ ದುರಸ್ತಿಗೊಳಿಸಿ ಮಾದರಿಯಾಗಿದೆ.
ಅರಸಿನಮಕ್ಕಿಯ ಆಟೋ ಚಾಲಕರಾದ ರಾಕೇಶ್ ಶೆಟ್ಟಿ ಹಾಗೂ ಉಪೇಂದ್ರ ಅವರೊಂದಿಗೆ ಸ್ಥಳೀಯ ಯುವಕರಾದ ಸಲ್ಮಾನ್ ಫರೀಜ್, ಮಹಮ್ಮದ್ ಫಾಝಲ್, ಬ್ರಿಜೇಶ್, ಶ್ರವಣ್ ಕುಮಾರ್ ಮತ್ತು ಯುವರಾಜ್ ಬಿ.ಎಸ್. ಅವರು ಆಗಸ್ಟ್ 23ರಂದು ಸ್ವಯಂಪ್ರೇರಿತರಾಗಿ ರಸ್ತೆಗಿಳಿದರು. ರಸ್ತೆಯಲ್ಲಿದ್ದ ಅಪಾಯಕಾರಿ ಗುಂಡಿಗಳಿಗೆ ಕಲ್ಲು ಮತ್ತು ಜಲ್ಲಿಕಲ್ಲುಗಳನ್ನು ತುಂಬಿ, ಮುಚ್ಚುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಟ್ಟರು.
ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಸಮಾಜಮುಖಿ ಕಾಳಜಿ ಮೆರೆದು, ಶ್ರಮದಾನದ ಮೂಲಕ ಸಾರ್ವಜನಿಕ ತೊಂದರೆಗೆ ಪರಿಹಾರ ಕಂಡುಕೊಂಡ ಈ ಯುವಕರ ಸಾಹಸಕ್ಕೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
