ಕ್ರೈಂ

ಮಂಗಳೂರು: ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಪೊಲೀಸರ ಮಿಂಚಿನ ಕಾರ್ಯಾಚರಣೆ; ಇಬ್ಬರು ವಶಕ್ಕೆ

 


ಮಂಗಳೂರು: ನಗರದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಇಬ್ಬರು ಶಂಕಿತ ಆರೋಪಿಗಳನ್ನು ಕದ್ರಿ ಮತ್ತು ಸುರತ್ಕಲ್ ಠಾಣಾ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

​ಕದ್ರಿ ಪೊಲೀಸರ ದಾಳಿ: ಎಂಡಿಎಂಎ ವಶ

ಪಂಪ್‌ವೆಲ್‌ನಿಂದ ನಂತೂರು ಸಂಪರ್ಕಿಸುವ ಸರ್ವಿಸ್ ರಸ್ತೆಯ ಬಳಿ ಆಟೋರಿಕ್ಷಾದಲ್ಲಿ ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಕುರಿತು ಲಭಿಸಿದ ಖಚಿತ ಮಾಹಿತಿ ಆಧರಿಸಿ ಕದ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಜೇಶ್ವರ ವರ್ಕಾಡಿ ಮೂಲದ ಮುಹಮ್ಮದ್ ಇರ್ಷಾದ್ (30) ಎಂಬಾತನನ್ನು ಬಂಧಿಸಲಾಗಿದೆ.

​ಬಂಧಿತನಿಂದ ₹1.36 ಲಕ್ಷ ಮೌಲ್ಯದ 13.69 ಗ್ರಾಂ ಎಂಡಿಎಂಎ, ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಸೇರಿದಂತೆ ಒಟ್ಟು ₹2,94,500 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

​ಸುರತ್ಕಲ್‌ನಲ್ಲಿ ಗಾಂಜಾ ಪೂರೈಕೆದಾರ ಬಂಧನ

ಮತ್ತೊಂದು ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಿತಿನ್ ಕೃಷ್ಣನ್ (27) ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಮೂಲದ ಈತ ಕದ್ರಿಯ ಪದವು ಮೈದಾನದ ಬಳಿಯ ಆಯುರ್ವೇದ ಕ್ಲಿನಿಕ್‌ನಲ್ಲಿ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ.

​ಆಗಸ್ಟ್ 17ರಂದು ಗಾಂಜಾ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಅಶ್ವಿನ್ ಕ್ಷೇವಿಯರ್ (24) ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಈ ಜಾಲದ ಸುಳಿವು ದೊರೆತಿತ್ತು. ಆರೋಪಿಯಿಂದ ₹60,000 ಮೌಲ್ಯದ 1.206 ಕೆ.ಜಿ. ಗಾಂಜಾ, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.



image