ದಕ್ಷಿಣ ಕನ್ನಡ

ಅರಂತೋಡು : ಅರಂತೋಡು ಬಳಿ ಭೀಕರ ಅಪಘಾತ: ಟಿಟಿ ಮೇಲೆ ಮಗುಚಿ ಬಿದ್ದ ಲಾರಿ; ಹಲವರಿಗೆ ಗಂಭೀರ ಗಾಯ



ಅರಂತೋಡು: ನಿಲ್ಲಿಸಿದ್ದ ಟೆಂಪೋ ಟ್ರಾವೆಲರ್ (ಟಿಟಿ) ವಾಹನದ ಮೇಲೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ, ಪ್ರಯಾಣಿಕರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿರುವ ದೂಃಖದ ಘಟನೆ ದೇವರಕೊಲ್ಲಿ ಸಮೀಪ ಬುಧವಾರ (ಆಗಸ್ಟ್ 26) ಸಂಜೆ ಸಂಭವಿಸಿದೆ.

​ಗುಜರಾತ್‌ನ ಅಹಮದಾಬಾದ್ ಮೂಲದ ಪ್ರವಾಸಿಗರು ಮಡಿಕೇರಿ ಪ್ರವಾಸ ಮುಗಿಸಿ ಮಂಗಳೂರಿನತ್ತ ಪಯಣಿಸುತ್ತಿದ್ದರು. ಈ ವೇಳೆ ದೇವರಕೊಲ್ಲಿಯ ಅಬ್ಬಿ ಫಾಲ್ಸ್ ಬಳಿ ರಸ್ತೆ ಬದಿಯಲ್ಲಿ ತಮ್ಮ ಟಿಟಿ ವಾಹನವನ್ನು ನಿಲ್ಲಿಸಿದ್ದರು. ಇದೇ ಸಮಯಕ್ಕೆ ಸುಳ್ಯದ ಕಡೆಗೆ ಅತಿ ವೇಗವಾಗಿ ಧಾವಿಸುತ್ತಿದ್ದ ಲಾರಿಯೊಂದು ಚಾಲಕನ ಹತೋಟಿ ತಪ್ಪಿ, ನಿಂತಿದ್ದ ಟಿಟಿ ವಾಹನದ ಮೇಲೆಯೇ ಮಗುಚಿ ಬಿದ್ದಿದೆ.

​ಈ ದುರ್ಘಟನೆಯಲ್ಲಿ ಟಿಟಿಯಲ್ಲಿದ್ದ ಏಳು ಮಂದಿ ಪ್ರಯಾಣಿಕರ ಪೈಕಿ ಒಬ್ಬರು ಹಾಗೂ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಸೇರಿ ಮೂವರಿಗೆ ತೀವ್ರ ಗಾಯಗಳಾಗಿವೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸುಳ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

​ಘಟನಾ ಸ್ಥಳಕ್ಕೆ ಕ್ರೇನ್ ತರೆಸಿ, ಟಿಟಿ ಮೇಲೆ ಬಿದ್ದಿದ್ದ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



image