ದಕ್ಷಿಣ ಕನ್ನಡ

ಮಂಗಳೂರು : ದ.ಕ. ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಶ್ರದ್ಧಾಭಕ್ತಿಪೂರ್ವಕ ಆಚರಣೆ



ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ (ಓಬಿಸಿ) ಮೋರ್ಚಾದ ವತಿಯಿಂದ ಯುಗಪುರುಷ, ಬ್ರಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮ ಜಯಂತ್ಯುತ್ಸವವನ್ನು ಮಂಗಳೂರಿನಲ್ಲಿ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

​ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, ಸಮಾಜಕ್ಕೆ ನಾರಾಯಣ ಗುರುಗಳ ಕೊಡುಗೆ ಅನನ್ಯವಾದದ್ದು ಎಂದು ಬಣ್ಣಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಎಲ್ಲರನ್ನೂ ಸ್ವಾಗತಿಸಿದ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಸಮಾಜ ಸುಧಾರಣೆಯಲ್ಲಿ ಗುರುಗಳ ಪಾತ್ರವನ್ನು ಸ್ಮರಿಸಿದರು.

​ಸಾಮಾಜಿಕ ಕ್ರಾಂತಿ ಹಾಗೂ ಗುರುಗಳಿಗೆ ಗೌರವ:

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್, "ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ, ಮಂಗಳೂರಿನ ಪ್ರಮುಖ ವೃತ್ತಕ್ಕೆ ನಾರಾಯಣ ಗುರುಗಳ ಹೆಸರನ್ನಿಟ್ಟು 'ನಾರಾಯಣ ಗುರು ವೃತ್ತ' ನಿರ್ಮಾಣ ಹಾಗೂ ಸರ್ಕಾರದ ಮಟ್ಟದಲ್ಲೇ ಅಧಿಕೃತವಾಗಿ ಜಯಂತಿ ಆಚರಣೆಗೆ ಚಾಲನೆ ನೀಡುವ ಮೂಲಕ ಮಹಾನ್ ಚೇತನಕ್ಕೆ ಸೂಕ್ತ ಗೌರವ ಸಲ್ಲಿಸಲಾಗಿದೆ," ಎಂದು ನೆನಪಿಸಿಕೊಂಡರು.

​ಒಂದೇ ಜಾತಿ, ಒಂದೇ ಮತ, ಒಂದೇ ದೇವರು:

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು, "ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿಯೆತ್ತಿ, 'ಒಂದೇ ಜಾತಿ, ಒಂದೇ ಮತ, ಒಂದೇ ದೇವರು' ಎಂಬ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ತತ್ವ, ಸಿದ್ಧಾಂತ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಶಾಂತಿ ಮತ್ತು ಸಮಾನತೆ ಸಾಧ್ಯ," ಎಂದು ಅಭಿಪ್ರಾಯಪಟ್ಟರು.

​


ಗಣ್ಯರ ಉಪಸ್ಥಿತಿ:

ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಪ್ರಮುಖರಾದ ರಾಜಗೋಪಾಲ್ ರೈ, ನಾರಾಯಣ ಗಟ್ಟಿ, ಭಾಸ್ಕರ್‌ಚಂದ್ರ ಶೆಟ್ಟಿ, ರಾಮ ಅಮೀನ್ ಪಚ್ಚನಾಡಿ, ಮೋಹನರಾಜ್ ಕೆ.ಆರ್., ರಾಜೇಶ್ ಮಡಿವಾಳ, ಕಿರಣ್ ಕುಮಾರ್ ಕೋಡಿಕಲ್, ಮನೋಹರ್ ಶೆಟ್ಟಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ, ಶಶಿದರ ಕಲ್ಮಂಜ ಹಾಗೂ ಮೋರ್ಚಾದ ಹಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

​ದೀಪಿಕಾ ಮನೋಜ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅರುಣ್ ಶೇಟ್ 'ವಂದೇ ಮಾತರಂ' ಗೀತೆ ಆಲಿಸಿದರು. ಕೋಶಾಧಿಕಾರಿ ಸತೀಶ್ ಮರವೂರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು. ಮೋರ್ಚಾದ ಉಪಾಧ್ಯಕ್ಷ ವಸಂತ ಹೊಸಬೆಟ್ಟು ಧನ್ಯವಾದ ಅರ್ಪಿಸಿದರು.



image