ಉಡುಪಿ

ಉಡುಪಿ : ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಉಡುಪಿಯ ಯುವತಿ ಕೃತಿ ಬಂಗೇರಾ ಆತ್ಮಹತ್ಯೆ

 


ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ 27 ವರ್ಷದ ಯುವತಿಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೋಖಾದಾಯಕ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿಯಲ್ಲಿ ಗುರುವಾರ ನಡೆದಿದೆ.

​ಕಲ್ಮಾಡಿ ನಿವಾಸಿ ರತ್ನಾ ಎಂಬುವರ ಪುತ್ರಿ ಕೃತಿ ಬಂಗೇರಾ (27) ಮೃತಪಟ್ಟ ದುರ್ದೈವಿ. ಮಾಡೆಲಿಂಗ್ ರಂಗದಲ್ಲಿ ಹೆಸರು ಮಾಡಿದ್ದ ಕೃತಿ, ಉಡುಪಿಯ ಕಡಿಯಾಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಐದು ತಿಂಗಳುಗಳಿಂದ ಅವರು ಕೆಲಸಕ್ಕೆ ತೆರಳದೆ ಮನೆಯಲ್ಲಿಯೇ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.

ಘಟನೆಯ ವಿವರ:

ಆಗಸ್ಟ್ 6ರಂದು ಕೃತಿ ಅವರ ತಾಯಿ ರತ್ನಾ ಕೆಲಸದ ನಿಮಿತ್ತ ಮಲ್ಪೆಗೆ ತೆರಳಿದ್ದರೆ, ಅವರ ಮತ್ತೊಬ್ಬಳು ಮಗಳು ಸಹ ಉಡುಪಿಗೆ ಹೋಗಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತಾಯಿ ಮನೆಗೆ ವಾಪಸ್ ಬಂದಾಗ, ಕೃತಿ ತಾಯಿಯನ್ನು ಹೊರಗೆ ಕಳುಹಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ.

​ಎಷ್ಟೇ ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಆತಂಕಗೊಂಡ ತಾಯಿ ತಕ್ಷಣವೇ ತಮ್ಮ ಸಹೋದರ ಚಂದ್ರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಚಂದ್ರ ಅವರು ಬಾಗಿಲು ಒಡೆದು ಒಳಪ್ರವೇಶಿಸಿದಾಗ, ಬೆಡ್‌ರೂಮ್‌ನ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೃತಿಯ ಮೃತದೇಹ ಪತ್ತೆಯಾಗಿದೆ.

ಮಾನಸಿಕ ಒತ್ತಡ ಶಂಕೆ:

ಮೃತ ಯುವತಿ ಕಳೆದ ಕೆಲವು ಸಮಯದಿಂದ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಈ ಹಠಾತ್ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

















image