ಬಂದಾರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕದಲ್ಲಿ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯಕ್ರಮವು ಆಗಸ್ಟ್ 30ರಂದು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ದೇವರಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗುರುಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರು ಅಂಚೆ ವಿಭಾಗದ ಉಪ ಅಧೀಕ್ಷರಾದ ಶ್ರೀ ಮೋಹನ್ ಶೆಟ್ಟಿ ಅವರು ಮಾತನಾಡಿ, ಸಾರ್ವಜನಿಕರಿಗೆ ಈ ರೀತಿಯ ಸೇವೆಗಳು ತಲುಪಿಸುವಲ್ಲಿ ಶಾಲೆಯ ಕೊಡುಗೆಯನ್ನು ಶ್ಲಾಘಿಸಿದರು.
ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡಿದ್ದು, ನೂರಾರು ಮಂದಿ ಹೊಸ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯವನ್ನು ಪೂರೈಸಿಕೊಂಡರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರಾದ ಶ್ರೀ ಪ್ರಶಾಂತ್ ನಿರುಂಬುಡ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಯ್ಯ ಆಚಾರ್ಯ, ಊರ ಹಿರಿಯರಾದ ಶ್ರೀಪತಿ ರಾವ್ ಹಾಗೂ ರಘುಪತಿ ಭಟ್ ಉಪಸ್ಥಿತರಿದ್ದರು.
ಅಲ್ಲದೆ, ಶಾಲಾ ಮುಖ್ಯ ಶಿಕ್ಷಕರಾದ ಶೀನಪ್ಪ ಗೌಡ ಎನ್., ಸಹ ಶಿಕ್ಷಕರು, ಎಸ್‌ಡಿಎಮ್‌ಸಿ ಸದಸ್ಯರು ಮತ್ತು ಊರ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


