ಬೆಳ್ತಂಗಡಿ: ನ್ಯಾಯಾಲಯದ ಸಮನ್ಸ್ ಹಾಗೂ ವಾರಂಟ್‌ಗೆ ಕಣ್ಣುತಪ್ಪಿಸಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಪುತ್ತೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳ್ಯ ತಾಲೂಕಿನ ಐವತ್ತೋಕ್ಲು ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಆದಮ್ ಎಂಬುವರ ಪುತ್ರ ಮಹಮ್ಮದ್ ಶರೀಪ್ (46) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ:
ವೇಣೂರು ಪೊಲೀಸ್ ಠಾಣೆಯಲ್ಲಿ 2008ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಕ್ಕೆ (ಅಪರಾಧ ಸಂಖ್ಯೆ: 71/2008) ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಲ್ಲಿ (CC No.535/2016) ಐಪಿಸಿ ಕಲಂ 457 ಹಾಗೂ 380 ಅಡಿಯಲ್ಲಿ ವಿಚಾರಣೆ ನಡೆಯುತ್ತಿತ್ತು. ಆದರೆ, ಆರೋಪಿ ಮಹಮ್ಮದ್ ಶರೀಪ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಆತನ ವಿರುದ್ಧ ವಾರಂಟ್ ಜಾರಿಯಾಗಿತ್ತು.
ಪೊಲೀಸ್ ಕಾರ್ಯಾಚರಣೆ:
ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಹಾಗೂ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ, ವೇಣೂರು ಠಾಣೆಯ ಉಪನಿರೀಕ್ಷಕ (ಎಸ್‌ಐ) ಅಕ್ಷಯ್ ಢವಗಿ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಆಗಸ್ಟ್ 13ರಂದು ಪುತ್ತೂರಿನ ದರ್ಬೆ ಎಂಬಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.
ಈ ಪೊಲೀಸ್ ತಂಡದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಬೆಣ್ಣಿಚನ್, ಸಿಬ್ಬಂದಿ ಬಸವರಾಜ್ ಹಾಗೂ ಬೆಳ್ತಂಗಡಿ ಉಪವಿಭಾಗೀಯ ಕಚೇರಿಯ ಸಿಬ್ಬಂದಿ ಪ್ರವೀಣ್ ಮೂರುಗೋಳಿ ಭಾಗವಹಿಸಿದ್ದರು.
ನ್ಯಾಯಾಂಗ ಬಂಧನ:
ಬಂಧಿತ ಆರೋಪಿಯನ್ನು ವೇಣೂರು ಠಾಣಾ ಸಿಬ್ಬಂದಿಗಳಾದ ನಿಕೋಲಸ್, ಬಸವರಾಜ್ ಮತ್ತು ಆಕಾಶ್ ಅವರ ಕಟ್ಟುನಿಟ್ಟಿನ ಭದ್ರತೆಯಲ್ಲಿ ಆ.13ರ ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸುದೀರ್ಘ ವಿಚಾರಣೆ ಆಲಿಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
