ಬೆಂಗಳೂರು: ರಾಜಧಾನಿಯ ಡಾ. ರಾಜ್‌ಕುಮಾರ್ ಸ್ಮಾರಕದ ಸಮೀಪ ನಡೆಯುತ್ತಿದ್ದ ಅಂಡರ್‌ಪಾಸ್ ಕಾಮಗಾರಿ ಸ್ಥಳದಲ್ಲಿ ಏಕಾಏಕಿ ಮಣ್ಣು ಕುಸಿದು ಬಿದ್ದು, ಭೀಕರ ಅಪಘಾತವೊಂದು ಸಂಭವಿಸಿದೆ. ಅದೃಷ್ಟವಶಾತ್, ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಮಣ್ಣಿನಡಿಯಲ್ಲಿ ಸಿಲುಕಿದ್ದ ಕಾರ್ಮಿಕನನ್ನು ಸಶರೀರವಾಗಿ ರಕ್ಷಿಸಲಾಗಿದೆ.
ಘಟನೆಯ ವಿವರ:
ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಸುಮಾರು 20 ಅಡಿ ಆಳದ ಗುಂಡಿಯನ್ನು ತೋಡಲಾಗಿತ್ತು. ಎಂದಿನಂತೆ ಇಂದು ಕೂಡ ಕಾರ್ಮಿಕರು ಕಾಮಗಾರಿಯಲ್ಲಿ ನಿರತರಾಗಿದ್ದರು. ನಾಲ್ವರು ಕಾರ್ಮಿಕರು ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಮೇಲ್ಭಾಗದಲ್ಲಿದ್ದ ಮಣ್ಣು ದಿಢೀರನೆ ಕುಸಿದು ಬಿದ್ದಿದೆ.
ಮಣ್ಣು ಕುಸಿಯುತ್ತಿದ್ದಂತೆಯೇ ಎಚ್ಚೆತ್ತ ಮೂವರು ಕಾರ್ಮಿಕರು ತಕ್ಷಣವೇ ಪಾರಾಗುವಲ್ಲಿ ಯಶಸ್ವಿಯಾದರು. ಆದರೆ, ಮತ್ತೊಬ್ಬ ಕಾರ್ಮಿಕ ಮಣ್ಣಿನ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿದ್ದನು.
ಕಾರ್ಯಾಚರಣೆ ನಡಸಿದ ಸಿಬ್ಬಂದಿ:
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಂದಿನಿ ಲೇಔಟ್ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅತ್ಯಂತ ಶ್ರಮ ವಹಿಸಿ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ತೀವ್ರ ಆತಂಕಕ್ಕೆ ಒಳಗಾಗಿದ್ದ ಗಾಯಾಳು ಕಾರ್ಮಿಕನನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
