ಉಪ್ಪಿನಂಗಡಿ: ಇಲ್ಲಿನ ಕೂಟೇಲು-ಸುಬ್ರಹ್ಮಣ್ಯ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಗೊಂದಲ ಹಾಗೂ ಸಮಸ್ಯೆಯ ಕುರಿತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಗಮನ ಸೆಳೆಯಲಾಗಿದ್ದು, ತಕ್ಷಣವೇ ಸ್ಪಂದಿಸಿದ ಸಂಸದರು ಸಂಬಂಧಪಟ್ಟ ಇಂಜಿನಿಯರ್ ಹಾಗೂ ಪ್ರಸನ್ನ ದರ್ಬೆ ಅವರನ್ನು ಸ್ಥಳ ಪರಿಶೀಲನೆಗೆ ಸೂಚಿಸಿದ್ದಾರೆ.
ಸಂಸದರ ನಿರ್ದೇಶನದಂತೆ ಸ್ಥಳಕ್ಕೆ ಭೇಟಿ ನೀಡಿದ ಇಂಜಿನಿಯರ್‌ಗಳು, ರಸ್ತೆಯ ವಾಸ್ತವ ಸಮಸ್ಯೆಯನ್ನು ಖುದ್ದು ಪರಿಶೀಲಿಸಿದರು. ಈ ವೇಳೆ ತಮಗೆ ಸಮಸ್ಯೆಯ ಗಂಭೀರತೆಯ ಮನವರಿಕೆಯಾಗಿದ್ದು, ತಕ್ಷಣವೇ ಈ ವಿಷಯವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುವುದು ಎಂದು ಸ್ಥಳೀಯ ನಾಗರಿಕರಿಗೆ ಭರವಸೆ ನೀಡಿದರು.
ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಹಾರದ ಭರವಸೆ ನೀಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಉಪ್ಪಿನಂಗಡಿ ಮತ್ತು ಕೂಟೇಲು ಭಾಗದ ನಾಗರಿಕರು ಹಾಗೂ ವಾಹನ ಸವಾರರು ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಬಿಜೆಪಿ ಉಪ್ಪಿನಂಗಡಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲ್, ಪುತ್ತೂರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ ಶೆಟ್ಟಿ, ಪ್ರಮುಖರಾದ ಜಯಂತ್ ಪುರೋಲಿ, ಸ್ಥಳೀಯರಾದ ಪ್ರತಾಪ್ ಪೆರಿಯಡ್ಕ, ಧರ್ಮಪ್ಪ ನಾಯ್ಕ, ಸುಚಿತ್, ಉದಿತ್ ರಂಗಜೆ, ಗಿರೀಶ್, ಪ್ರಶಾಂತ್ ರಾಮಕುಂಜ, ನವೀನ್, ಹಾಗೂ ಹರೀಶ್ ಪಟ್ಲ ಉಪಸ್ಥಿತರಿದ್ದರು.



