ಕೊಕ್ಕಡ:ಕಾಡಾನೆ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಇಡ್ಯಾಲು ನಿವಾಸಿ ಬಾಲಕೃಷ್ಣ ಗೌಡ ಅವರ ಗೃಹಕ್ಕೆ ಧಾರ್ಮಿಕ ಹಾಗೂ ಯುವ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ವ್ಯಕ್ತಪಡಿಸಿದರು.
ಮೃತರ ನಿವಾಸಕ್ಕೆ ತೆರಳಿದ ಅವರು, ಬಾಲಕೃಷ್ಣ ಗೌಡ ಅವರ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. "ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ. ಈ ಕಠಿಣ ಸಮಯದಲ್ಲಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ" ಎಂದು ತೀವ್ರ ಸಂತಾಪ ಸೂಚಿಸಿದ ಅವರು, ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ಹಸ್ತಾಂತರಿಸಿದರು.
ಸರ್ಕಾರದ ಪರಿಹಾರ ತಕ್ಷಣ ತಲುಪಲಿ:
ಬ ಬಳಿಕ ಮಾತನಾಡಿದ ಕಿರಣ್ ಚಂದ್ರ, "ಕಾಡಾನೆ ದಾಳಿಯಿಂದ ಕುಟುಂಬದ ಮುಖ್ಯಸ್ಥರನ್ನು ಕಳೆದುಕೊಂಡಿರುವುದು ತೀವ್ರ ನೋವಿನ ಸಂಗತಿ. ಸರ್ಕಾರ ಹಾಗೂ ಅರಣ್ಯ ಇಲಾಖೆ ಮೃತರ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಧನ ಹಾಗೂ ಇತರ ಸೌಲಭ್ಯಗಳು ವಿಳಂಬವಿಲ್ಲದೆ, ಶೀಘ್ರವಾಗಿ ತಲುಪುವಂತಾಗಬೇಕು" ಎಂದು ಒತ್ತಾಯಿಸಿದರು.
ಶಾಶ್ವತ ಪರಿಹಾರಕ್ಕೆ ಆಗ್ರಹ:
ಗ್ರಾಮೀಣ ಭಾಗಗಳಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಅರಣ್ಯ ಇಲಾಖೆ ಮತ್ತು ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಾನವ-ವನ್ಯಜೀವಿ ಸಂಘರ್ಷ ತಡೆಯಲು ತಕ್ಷಣವೇ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಕರು ಉಪಸ್ಥಿತರಿದ್ದರು.
