ಮೋಕ್ಷ
ಮೋಕ್ಷದ ಹಾದಿಯ ಕಾಣ ಹೊರಟಿರುವೆ
ಕಣ್ಣು ಕಿವಿಗಳಡ್ದಿಯಾಗುತ್ತಿವೆ!
ಸಹಾಯ ಕೇಳುತ್ತಿರುವಾತನ,
ಮಾತು ಕೇಳಿದರೂ
ಕಿವುಡಿಯಂತಿರುವೆ!
ಅನ್ಯಾಯ ಕಂಡರೂ
ಕುರುಡಿಯಾಗಿರುವೆ!
ಬಾಯಿ ಮೇಲೆ ಬೆರಳಿಟ್ಟು ಸುಮ್ಮನಿದ್ದರೆ,
ಮುಕ್ತಿಯ ಪ್ರಾಪ್ತಿ ಸಾಧ್ಯವೇ?
ಮೋಕ್ಷದ ಹಾದಿಯ ಕಾಣ ಹೊರಟಿರುವೆ!
ನಾಲಗೆಯು ಅಡ್ಡಿಯಾಗುತ್ತಿದೆ!
ಕ್ಷಣ ಕ್ಷಣಕೂ ಪ್ರಖರ ಮಾತುಗಳ ಹಲ್ಲೆ!
ಅದೆಷ್ಟು ಮನಸ್ಸುಗಳ ಹತ್ಯೆ!
ಹಾಗೆಂದು ನಾಲಗೆಗೆ ಬುದ್ಧಿ ಹೇಳಲೇ?
ಅಥವಾ,
ತೀಕ್ಷ್ಣವಾದ ಮಾತುಗಳಾಡಿ
ಮತ್ತೆ ಇಲ್ಲೇ ಹುಟ್ಟಲೇ?
ಮೋಕ್ಷದ ಹಾದಿಯ ಕಾಣ ಹೊರಟಿರುವೆ
ಮನಸ್ಸು ಅಡ್ಡಿಯಾಗುತ್ತಿದೆ!
ಅರಿಷಡ್ವರ್ಗಗಳ ನಿಗ್ರಹಿಸಲಾಗದೆ
ಬಲಿಯಾಗುತ್ತಿರುವವರು ಅವರೆಲ್ಲಾ!
ಹಾಗೆಂದು ಮನಸ್ಸ ನಿಗ್ರಹಿಸಲೇ?
ಅಥವಾ
ಕ್ರೂರತ್ವ ಬಚ್ಚಿಟ್ಟು ಮತ್ತೆ ನರಕ ಸೇರಲೇ?
ಅವರ ತಪ್ಪುಗಳ ಸುತ್ತಲೂ
ಮೇಧಾವಿಯತೆ ನನ್ನ ಮಾತುಗಳು!
ಕೆಟ್ಟು ಹಿಡಿದಿದೆ ಗೆದ್ದಲು!
ನನಗಾಗದೆ ನನ್ನ ತಿದ್ದಲು!
ನನ್ನದು ಸಣ್ಣ ಆಸೆಯಲ್ಲ
ಕಾಣಬೇಕೆಂದಿರುವುದು
ಗುಡ್ಡ, ಬೆಟ್ಟ,ಸಮುದ್ರವಲ್ಲ!
ಜೀವನದ ಪರಮಗುರಿ
ಮೋಕ್ಷ!
🪶ನವ್ಯಶ್ರೀ ಸ್ವರ್ಗ
ವಾಣಿಜ್ಯ ಉಪನ್ಯಾಸಕರು
ಸರಕಾರಿ ಪದವಿ ಪೂರ್ವ ಕಾಲೇಜು
ಉಪ್ಪಿನಂಗಡಿ.

