ಕ್ರೈಂ

ಸುಳ್ಯ: ವಿವಾಹಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ - ಆಟೋ ಚಾಲಕನ ಬಂಧನ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್

 


ಸುಳ್ಯ: ಹಾವೇರಿ ಮೂಲದ ವಿವಾಹಿತ ಮಹಿಳೆಯೊಬ್ಬರ ಖಾಸಗಿ ವೀಡಿಯೋ ಇಟ್ಟುಕೊಂಡು ಬೆದರಿಕೆಯೊಡ್ಡಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಆಟೋ ಚಾಲಕನೊಬ್ಬನನ್ನು ಸುಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

​ಜಯನಗರ ನಿವಾಸಿ, ಆಟೋ ಚಾಲಕ ಗೋಪಾಲಕೃಷ್ಣ ಬಂಧಿತ ಆರೋಪಿ.

ಘಟನೆಯ ವಿವರ:

ಹಾವೇರಿ ಜಿಲ್ಲೆಯ ಮೂಲದ ಮಹಿಳೆಯೊಬ್ಬರು ಸುಳ್ಯದ ಸೂರ್ತಿಲ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಣಂತಿಯರ ಆರೈಕೆ ಕೆಲಸ ಮಾಡಿಕೊಂಡಿದ್ದರು. ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಆಟೋ ಚಾಲಕ ಗೋಪಾಲಕೃಷ್ಣನ ಪರಿಚಯವಾಗಿದೆ. 2025ರ ಜೂನ್ ತಿಂಗಳಲ್ಲಿ ಮಹಿಳೆಯನ್ನು ತನ್ನ ಮನೆಗೆ ಬರುವಂತೆ ಒತ್ತಾಯಿಸಿದ ಆರೋಪಿ, ಬಳಿಕ ಮದ್ಯ ಕುಡಿಸಿ ಆಕೆಯ ಮೇಲೆ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.

​ಈ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದ ಗೋಪಾಲಕೃಷ್ಣ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿ ಮಹಿಳೆಯ ಮೇಲೆ ನಿರಂತರವಾಗಿ ದೌರ್ಜನ್ಯ ಮುಂದುವರಿಸಿದ್ದ.

​ಆಗಸ್ಟ್ 2ರಂದು ಮತ್ತೆ ಮಹಿಳೆಯ ಬಾಡಿಗೆ ಮನೆ ಬಳಿ ಬಂದಿದ್ದ ಆರೋಪಿ, ತನ್ನೊಂದಿಗೆ ಬರುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ವೀಡಿಯೋವನ್ನು ವಾಟ್ಸಪ್‌ನಲ್ಲಿ ವೈರಲ್ ಮಾಡುವುದಾಗಿ ಹಾಗೂ ಮಹಿಳೆ ಮತ್ತು ಆಕೆಯ ಪತಿಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

​ಈ ಕುರಿತು ಸಂತ್ರಸ್ತೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸುಳ್ಯ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳ ಮಹಜರು ಹಾಗೂ ತನಿಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.



image