ಬೆಳ್ತಂಗಡಿ (news2daykannada.com): ತಾಲೂಕಿನಾದ್ಯಂತ ಕಳೆದ 48 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾನಾ ಭಾಗಗಳಲ್ಲಿ ಅಪಾರ ಪ್ರಮಾಣದ ಹಾನ ಸಂಭವಿಸಿದ್ದು, ಸಾರ್ವಜನಿಕರ ಜೀವನ ಸಂಪೂರ್ಣ ಕಷ್ಟಕ್ಕೆ ಸಿಲುಕಿದೆ. ಮಳೆಯಿಂದಾಗಿ ಉಂಟಾಗಿರುವ ರಸ್ತೆ ಸಂಪರ್ಕ ಕಡಿತ, ವಿದ್ಯುತ್ ಅಭಾವ ಹಾಗೂ ಆಸ್ತಿಪಾಸ್ತಿ ಹಾನಿ ಹಿನ್ನೆಲೆಯಲ್ಲಿ, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಆಗಸ್ಟ್ 3ರಂದು ಅಧಿಕಾರಿಗಳ ಉನ್ನತ ಮಟ್ಟದ ತುರ್ತು ಸಭೆ ಜರುಗಿತು.
ತಾಲೂಕು ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ, ತಾಲೂಕು ಮಟ್ಟದ ವಿವಿಧ ಇಲಾಖಾ ಮುಖ್ಯಸ್ಥರೊಂದಿಗೆ ಧೀರ್ಘ ಸಮಾಲೋಚನೆ ನಡೆಸಿದ ಶಾಸಕರು, ತಕ್ಷಣವೇ ಪರಿಹಾರ ಹಾಗೂ ರಕ್ಷಣಾ ಕಾರ್ಯಕ್ಕೆ ಇಳಿಯುವಂತೆ ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು ಹಾಗೂ ನಿದೇಶನಗಳು:
- ರಸ್ತೆ ಮತ್ತು ಸಂಪರ್ಕ ಪುನರ್‌ಸ್ಥಾಪನೆ: ಕಿಲ್ಲೂರು-ಲಾಯಿಲ, ನಾವೂರು ಮಿತ್ತಬಾಗಿಲು ಸೇರಿ ಹಲವು ಕಡೆ ರಸ್ತೆಗಳ ಮೇಲೆ ನೀರು ನಿಂತು ಸಂಚಾರ ಸಂಪೂರ್ಣ ಬಂದ್ ಆಗಿದೆ. ಕುಸಿದಿರುವ ಸೇತುವೆಗಳು ಹಾಗೂ ಗುಡ್ಡ ಕುಸಿತದ ಭೀತಿ ಇರುವ ಸೂಕ್ಷ್ಮ ಪ್ರದೇಶಗಳ ಸಮಗ್ರ ವರದಿ ತಕ್ಷಣ ಸಲ್ಲಿಸಲು ಸೂಚಿಸಲಾಗಿದ್ದು, ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಲಾಗಿದೆ.
- ವಿದ್ಯುತ್ ಮತ್ತು ಕುಡಿಯುವ ನೀರು: ಅಪಾಯಕಾರಿ ಮರ ಹಾಗೂ ಕಡ್ಡಿಗಳನ್ನು ತಕ್ಷಣ ತೆರವುಗೊಳಿಸಿ ವಿದ್ಯುತ್ ಲೈನ್‌ಗಳನ್ನು ಸುಸ್ಥಿತಿಯಲ್ಲಿಡಲು ಮೆಸ್ಕಾಂ ಸಿಬ್ಬಂದಿಗೆ ಆಜ್ಞಾಪಿಸಲಾಗಿದೆ.
- ಸುರಕ್ಷಿತ ಸ್ಥಳಾಂತರ ಹಾಗೂ ಪರಿಹಾರ: ನದಿ ಪಾತ್ರ ಹಾಗೂ ತಗ್ಗು ಪ್ರದೇಶಗಳಲ್ಲಿರುವ ನಿವಾಸಿಗಳನ್ನು ತಕ್ಷಣವೇ ಕಾಳಜಿ ಕೇಂದ್ರಗಳಿಗೆ ಅಥವಾ ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಗ್ರಾ.ಪಂ. ಅಧಿಕಾರಿಗಳಿಗೆ ಆಜ್ಞಾಪಿಸಲಾಯಿತು. ಹಾನಿಗೊಳಗಾದ ಸಂತ್ರಸ್ತರಿಗೆ ವಿಳಂಬವಿಲ್ಲದೆ ತಕ್ಷಣದ ಪರಿಹಾರ ವಿತರಿಸಲು ತಿಳಿಸಲಾಗಿದೆ.
- ಶಾಲೆ-ಕಾಲೇಜುಗಳ ಸುರಕ್ಷತೆಗೆ ಆದ್ಯತೆ: ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಭದ್ರತೆಯ ಬಗ್ಗೆ ನಿರಂತರ ನಿಗಾವಹಿಸಲಾಗುತ್ತಿದ್ದು, ಅಸುರಕ್ಷಿತ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿರುವ ತರಗತಿಗಳ ವಿದ್ಯಾರ್ಥಿಗಳನ್ನು ತಕ್ಷಣ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.
24x7 ಕಂಟ್ರೋಲ್ ರೂಂ ಆರಂಭ:
ಸಾರ್ವಜನಿಕರ ತುರ್ತು ನೆರವಿಗಾಗಿ ತಾಲೂಕು ಕಚೇರಿಯಲ್ಲಿ ದಿನದ 24 ಗಂಟೆಯೂ ಕಾರ್ಯಾಚರಿಸುವ 'ಕಂಟ್ರೋಲ್ ರೂಂ' (ಸಹಾಯವಾಣಿ) ತೆರೆಯಲು ತಹಶೀಲ್ದಾರ್‌ಗೆ ಸೂಚಿಸಲಾಯಿತು. ಯಾವುದೇ ಇಲಾಖೆಯ ನಡುವೆ ಸಮನ್ವಯದ ಕೊರತೆ ಬರದಂತೆ, ಶೌರ್ಯ ವಿಪತ್ತು ನಿರ್ವಹಣಾ ತಂಡ, ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್ಸ್ ಆಂಡ್ ರೇಂಜರ್ಸ್ ಹಾಗೂ ಟಾಸ್ಕ್ ಫೋರ್ಸ್‌ಗಳನ್ನು ಸದಾ ಸಜ್ಜಾಗಿರಿಸಲು ನಿರ್ಧರಿಸಲಾಗಿದೆ.
ಸ್ಥಳದಲ್ಲೇ ಇದ್ದು ಪರಿಸ್ಥಿತಿ ನಿಭಾಯಿಸಲು ಖಡಕ್ ಸೂಚನೆ:
"ನಮ್ಮ ಮೊದಲ ಆದ್ಯತೆ ಜನರ ಪ್ರಾಣ ಹಾಗೂ ಆಸ್ತಿಪಾಸ್ತಿ ರಕ್ಷಣೆ. ಮುಂದಿನ ದಿನಗಳಲ್ಲೂ ಮಳೆ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು," ಎಂದು ಶಾಸಕ ಹರೀಶ್ ಪೂಂಜ ಎಚ್ಚರಿಸಿದರು. ಇನ್ನು 15 ದಿನಗಳ ನಂತರ ಮತ್ತೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ತುರ್ತು ಸಭೆಯಲ್ಲಿ ತಹಸೀಲ್ದಾರ್ ಎಸ್.ಎನ್. ನರಗುಂದ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಭವಾನಿ ಶಂಕರ್, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ಸೇರಿದಂತೆ ಪ್ರಮುಖ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

