ದಕ್ಷಿಣ ಕನ್ನಡ

ಮಂಗಳೂರು : ತಂಗಿಯ ಅಗಲಿಕೆ ತಾಳಲಾರದೆ ಗಲ್ಫ್‌ನಿಂದ ಬಂದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು

 


ಮಂಗಳೂರು: ತಂಗಿಯ ಹಠಾತ್ ಸಾವಿನಿಂದ ತೀವ್ರವಾಗಿ ಕಂಗಾಲಾಗಿದ್ದ ಸಹೋದರನೊಬ್ಬ ಗಲ್ಫ್‌ನಿಂದ ಮಂಗಳೂರಿಗೆ ಮರಳಿದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

​ಮೃತ ಯುವಕನನ್ನು ಕೇರಳದ ಬೇಕಲ್ ಮೂಲದ ಅರ್ಜುನ್ ಮಹೇಶ್ (24) ಎಂದು ಗುರುತಿಸಲಾಗಿದೆ. ಕಳೆದ ಜೂನ್ ತಿಂಗಳಲ್ಲಿ ಅರ್ಜುನ್ ಅವರ ತಂಗಿ ಐಜಾ ಆರ್. ಮಹೇಶ್ ಕೋಚಿಂಗ್ ಸೆಂಟರ್‌ ಒಂದರ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂಗಿಯ ಅಗಲಿಕೆಯ ನೋವಿನಿಂದ ಅರ್ಜುನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

​ಭಾನುವಾರ ಗಲ್ಫ್‌ನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅರ್ಜುನ್, ಬಳಿಕ ಮನೆಗೆ ತೆರಳದೆ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಸೋಮವಾರ ಮಧ್ಯಾಹ್ನ ಮರವೂರಿನ ಲಾಡ್ಜ್‌ವೊಂದರ ಕೊಠಡಿಯಲ್ಲಿ ಅರ್ಜುನ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

​ಕೆಲವೇ ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಇಬ್ಬರು ಹದಿಹರೆಯದ ಮಕ್ಕಳು ದುರಂತವಾಗಿ ಕೊನೆಯುಸಿರೆಳೆದಿರುವುದು ಕುಟುಂಬಸ್ಥರನ್ನು ಮತ್ತು ಸ್ಥಳೀಯರನ್ನು ತೀವ್ರ ಶೋಕಸಾಗರದಲ್ಲಿ ತಳ್ಳಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಜ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



image