ದಕ್ಷಿಣ ಕನ್ನಡ

ಬೆಳ್ತಂಗಡಿ: ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ ದಿನಸಿ ಅಂಗಡಿ – ಲಕ್ಷಾಂತರ ರೂ. ನಷ್ಟ!



ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳ ಎಂಬಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ದಿನಸಿ ಅಂಗಡಿಯೊಂದು ಸಂಪೂರ್ಣವಾಗಿ ಭಸ್ಮವಾಗಿದೆ.

​ಬೆಂದ್ರಾಳ ನಿವಾಸಿ ಶರೀಫ್ ಎಂಬುವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಜ್ವಾಲೆಗಳು ಅಂಗಡಿ ಹಾಗೂ ಕಟ್ಟಡವನ್ನು ಆವರಿಸಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸುವ ಯತ್ನ ನಡೆಸಿದರು. ಸ್ಥಳೀಯರ ಸಕಾಲಿಕ ಮುನ್ನೆಚ್ಚರಿಕೆಯಿಂದಾಗಿ ಬೆಂಕಿ ಪಕ್ಕದ ಪ್ರದೇಶಗಳಿಗೆ ಹರಡುವುದು ತಪ್ಪಿದೆ.

​ಆದರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳು, ಕಟ್ಟಡ ಹಾಗೂ ನಗದಾಗಿ ಇರಿಸಲಾಗಿದ್ದ ಸುಮಾರು ₹1 ಲಕ್ಷ ಹಣ ಸಂಪೂರ್ಣವಾಗಿ ನಾಶವಾಗಿದೆ. ಈ ಅವಘಡದಿಂದ ಒಟ್ಟು ₹5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

​ಘಟನೆಯ ಸುಳಿವು ಸಿಗುತ್ತಿದ್ದಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



image