ಮಂಗಳೂರು:ಸ್ಥಳೀಯ ಜನರ ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸದೇ ಹಾಗೂ ಯಾವುದೇ ಭೌತಿಕ ಸರ್ವೆ ನಡೆಸದೇ ಪರಿಸರ ಸೂಕ್ಷ್ಮ ವಲಯದ (Eco-Sensitive Zone - ESZ) ಅಧಿಸೂಚನೆ ಹೊರಡಿಸುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಗಳು ಯಾವುದೇ ಪ್ರಮುಖ ನೀತಿ ರೂಪಿಸುವ ಮುನ್ನ ಸ್ಥಳೀಯ ಜನಸಮೂಹದೊಂದಿಗೆ ಮುಕ್ತ ಸಂವಾದ ನಡೆಸಬೇಕು. ವಾಸ್ತವ ಸ್ಥಿತಿಗತಿಗಳನ್ನು ಸರಿಯಾಗಿ ಅರಿತು ಕಾನೂನುಗಳನ್ನು ಜಾರಿಗೆ ತರಬೇಕೇ ಹೊರತು, ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಮಂಜಸವಲ್ಲ. ಈ ವಿಷಯದಲ್ಲಿ ಸಾರ್ವಜನಿಕರ ಹಿತಾಸಕ್ತಿ ಕಾಯಲು ಜನಪ್ರತಿನಿಧಿಗಳು, ವಿಶೇಷವಾಗಿ ಶಾಸಕರು ಮತ್ತು ಸಂಸದರು ಕಾನೂನಿನ ವಿವಿಧ ಮಜಲುಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿ ಧ್ವನಿಯೆತ್ತಬೇಕಾದ ತುರ್ತು ಅಗತ್ಯವಿದೆ ಎಂದಿದ್ದಾರೆ.
ಗ್ರಾಮಸಭೆ ನಿರ್ಣಯವೇ ಅಂತಿಮವಾಗಲಿ:
ರಾಜ್ಯ ಸರ್ಕಾರವು ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ಪರಿಸರ ಸೂಕ್ಷ್ಮ ವಲಯವನ್ನು ಘೋಷಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಬುಡಕಟ್ಟು ಸಮುದಾಯಗಳಿಗೆ ಸಿಕ್ಕಿರುವ ಕಾನೂನುಬದ್ಧ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ ನಿಯಮಗಳನ್ನು ರೂಪಿಸಿ ಕೇಂದ್ರಕ್ಕೆ ಶಿಫಾರಸು ಕಳುಹಿಸಬೇಕು.
ಅರಣ್ಯ ಹಕ್ಕು ಕಾಯ್ದೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ 1980ರಿಂದ ಯಾವುದೇ ತೊಡಕಿಲ್ಲದಿದ್ದರೂ, ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳು ಮೊಂಡುವಾದ ಮಂಡಿಸುತ್ತಿದ್ದಾರೆ. ಈ ಮೂಲಕ ಬುಡಕಟ್ಟು ಸಮುದಾಯದ ನೈಸರ್ಗಿಕ ಹಕ್ಕುಗಳನ್ನು ಮೊಟಕುಗೊಳಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಮುಂದೆ ಇಡೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಹೆಸರಿಸಿ, ಅಧಿಕಾರಿಗಳು ಗಿರಿಜನರ ಹಾಗೂ ಸ್ಥಳೀಯರ ದಿನನಿತ್ಯದ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುವುದು ನಿಶ್ಚಿತ.
ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖ:
ಸುಪ್ರೀಂ ಕೋರ್ಟ್ 'ಒರಿಸ್ಸಾ ಮೈನಿಂಗ್ ಕೇಸ್' ಪ್ರಸಿದ್ಧ ಪ್ರಕರಣದಲ್ಲಿ ಅರಣ್ಯ ಹಕ್ಕು ಹಾಗೂ ಗ್ರಾಮಸಭೆಗಳ ಅಧಿಕಾರ ಮತ್ತು ಮಹತ್ವವನ್ನು ಎತ್ತಿಹಿಡಿದಿದೆ. ಅದೇ ಮಾದರಿಯಲ್ಲಿ ಸರ್ಕಾರ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಹೊರಡಿಸುವ ಮುನ್ನ ಆಯಾ ಗ್ರಾಮಸಭೆಗಳು ಕೈಗೊಳ್ಳುವ ನಿರ್ಣಯಗಳನ್ನು ಗಂಭೀರವಾಗಿ పరిಗಣಿಸಿ, ಸೂಕ್ತ ತಿದ್ದುಪಡಿಗಳೊಂದಿಗೆ ಮುಂದುವರಿಯಬೇಕು ಎಂದು ಹರೀಶ್ ಎಳನೀರ್ ಆಗ್ರಹಿಸಿದ್ದಾರೆ.
