ಮಂಗಳೂರು: ಪ್ರಸಿದ್ಧ ಶಿಕ್ಷಣ ತಜ್ಞೆ, ಸಮಾಜ ಸೇವಕಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮಾತೃಶ್ರೀ ಎ. ರತ್ನಕಾಂತಿ ಶೆಟ್ಟಿ (93) ಅವರು ಭಾನುವಾರ ಕದ್ರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಅವರು ಪುತ್ರರಾದ ದೇವಿಚರಣ್ ಶೆಟ್ಟಿ, ಡಾ. ಶಿವಶರಣ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಹರಿಕಿಶನ್ ಶೆಟ್ಟಿ ಹಾಗೂ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ.
ಶಿಕ್ಷಣ ರಂಗದಲ್ಲಿ ದಕ್ಷ ಸೇವೆ:
ರತ್ನಕಾಂತಿ ಶೆಟ್ಟಿ ಅವರು ಮಂಗಳೂರಿನ ಹಂಪನಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ (ಈಗಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಧ್ಯಾಪಕಿಯಾಗಿ ಸೇವೆ ಆರಂಭಿಸಿದ್ದರು. ಆ ಬಳಿಕ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕಿಯಾಗಿ ಮತ್ತು ಪ್ರಾದೇಶಿಕ ನಿರ್ದೇಶಕಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ:
ಶಿಕ್ಷಣ ಹಾಗೂ ಸಮಾಜಸೇವೆಯನ್ನು ಮುಂದುವರಿಸುವ ಉದ್ದೇಶದಿಂದ ಅವರು 'ಪ್ರೇಮಕಾಂತಿ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್' ಸ್ಥಾಪಿಸಿ, ಅದರ ಅಧ್ಯಕ್ಷೆಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿದ್ದರು. ಜೊತೆಗೆ 'ಶ್ರೀದೇವಿ ಎಜುಕೇಷನ್ ಟ್ರಸ್ಟ್ ಮತ್ತು ಕಾಲೇಜುಗಳ' ಸಂಸ್ಥಾಪಕ ನಿರ್ದೇಶಕಿಯಾಗಿ ಹಾಗೂ 'ಶ್ರೀ ರಾಮಕೃಷ್ಣ ಕೋ-ಆಪರೇಟಿವ್ ಸೊಸೈಟಿ'ಯ ನಿರ್ದೇಶಕಿಯಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.
ರಾಷ್ಟ್ರೀಯ ಪ್ರಶಸ್ತಿ ಗೌರವ:
ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ ಅವರಿಗೆ ಹಲವಾರು ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಲಭಿಸಿವೆ. ರತ್ನಕಾಂತಿ ಶೆಟ್ಟಿ ಅವರ ಅಗಲಿಕೆಗೆ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಹಲವು ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
