ದಕ್ಷಿಣ ಕನ್ನಡ

ಬೆಳ್ತಂಗಡಿ : ಮುಗೇರಡ್ಕ ಸೇತುವೆ ಕಾಮಗಾರಿ: ಹೆದ್ದಾರಿ ಅಧಿಕಾರಿಗಳಿಂದ ಸ್ಥಳ ತಪಾಸಣೆ, ಸುಗಮ ಸಂಚಾರಕ್ಕೆ ಪ್ಲಾನ್!



ಬೆಳ್ತಂಗಡಿ: ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಜೋಡಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಈ ವೇಳೆ ಸಾರ್ವಜನಿಕರ ಸುರಕ್ಷತೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶುಕ್ರವಾರ (ಆಗಸ್ಟ್ 14) ಸ್ಥಳ ಪರಿಶೀಲನೆ ನಡೆಸಿದರು.

​ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾ ಅವರ ನಿರ್ದೇಶನದಂತೆ, ಸ್ಟ್ರಕ್ಚರಲ್ ಇಂಜಿನಿಯರ್ ಪ್ರಸನ್ನ ದರ್ಬೆ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಜಿ ಅವರೊಂದಿಗೆ ಗುರುವಾರವೇ (ಆ.13) ಸುದೀರ್ಘ ಸಮಾಲೋಚನೆ ನಡೆಸಿದ್ದರು.





ಪ್ರವಾಸೋದ್ಯಮ ಮತ್ತು ಭಕ್ತರ ಅನುಕೂಲಕ್ಕೆ ಆದ್ಯತೆ

​ಮುಗೇರಡ್ಕ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಗೂ ಪ್ರದೇಶದ ಪ್ರವಾಸೋದ್ಯಮ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹೆದ್ದಾರಿ ಪಕ್ಕದಲ್ಲಿ ಸೂಕ್ತ ಜಾಗ ಕಾಯ್ದಿರಿಸುವ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ಹೊಸ ಸೇತುವೆಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆ ನಿರ್ಮಾಣದ ತಾಂತ್ರಿಕ ಸವಾಲುಗಳ ಕುರಿತು ಇಂಜಿನಿಯರ್‌ಗಳ ತಂಡ ಆ.14ರಂದು ಪ್ರತ್ಯಕ್ಷ ವೀಕ್ಷಣೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದೆ.


ಪ್ರಮುಖರ ಉಪಸ್ಥಿತಿ

​ಸ್ಥಳ ತಪಾಸಣೆ ಸಂದರ್ಭದಲ್ಲಿ ಬಿಜೆಪಿಯ ಕಣಿಯೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಹಾಗೂ ಬಂದಾರು ಗ್ರಾ.ಪಂ. ಮಾಜಿ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಪುತ್ತೂರು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ ಉಪ್ಪಿನಂಗಡಿ, ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಬಂದಾರು ಉಪಸ್ಥಿತರಿದ್ದರು.

​ಅಲ್ಲದೆ, ಕಾಮಗಾರಿ ಉಸ್ತುವಾರಿ ವಹಿಸಿರುವ ಗೋಮಾ ಕನ್ಸ್ಟ್ರಕ್ಷನ್ಸ್ ಸಂಸ್ಥೆಯ ಅಧಿಕಾರಿಗಳಾದ ಜಯರಾಮ್, ಮೋಹನ್ ಹಾಗೂ ತಾಂತ್ರಿಕ ಇಂಜಿನಿಯರ್‌ಗಳ ತಂಡ ಭಾಗವಹಿಸಿತ್ತು.



image