ಮಣಿಪಾಲ (ಉಡುಪಿ): ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ವಿದ್ಯಾರ್ಥಿಗಳಾದ ಅಕ್ಷಯ್ ಎ. (21), ಪುನೀತ್ ಎಸ್. (21), ಶಮಂತ್ ಕೆ.ಆರ್. (21) ಹಾಗೂ ಯಶವಂತ್ ಬಿ.ಜೆ. (21) ಬಂಧಿತ ಆರೋಪಿಗಳು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ವಿವರ:
ಆಗಸ್ಟ್ 2ರ ರಾತ್ರಿ ಹೆರ್ಗ ಗ್ರಾಮದ ಈಶ್ವರನಗರದ ಜನನಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಸಮೀಪದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯಶ್‌ರಾಜ್ ಅವರು ತಮ್ಮ ಸಹೋದರ ಪವನ್ ಕುಮಾರ್ ಮತ್ತು ಸ್ನೇಹಿತ ಶ್ರೇಯಸ್ ಅವರೊಂದಿಗೆ ತೆರಳುತ್ತಿದ್ದಾಗ, ಎರಡು ಕಾರುಗಳಲ್ಲಿ ಬಂದ ಆರೋಪಿಗಳು ಏಕಾಏಕಿ ಪವನ್ ಅವರನ್ನು ತಡೆದು ನಿಲ್ಲಿಸಿ ಅಸಭ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬಳಿಕ ಕೈ-ಕಾಲುಗಳಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಲ್ಲದೆ, ಮೆಟಲ್ ಪಂಚ್‌ನಿಂದ ಮುಖಕ್ಕೆ ಬಲವಾಗಿ ಗುದ್ದಿ ಮೂಗಿನ ಭಾಗಕ್ಕೆ ಗಂಭೀರ ಗಾಯಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಗಲಾಟೆ ಬಿಡಿಸಲು ಬಂದ ಯಶ್‌ರಾಜ್ ಹಾಗೂ ಶ್ರೇಯಸ್ ಮೇಲೆಯೂ ಹಲ್ಲೆ ನಡೆಸಿ, ಅವರ ಬಟ್ಟೆಗಳನ್ನು ಹರಿದು ಹಾಕಿ ಜೀವ ಬೆದರಿಕೆ ಒಡ್ಡಿ ಸ್ಥಳದಿಂದ ಕಾಲ್ಕಿತ್ತಿದ್ದರು.
ಘಟನೆ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, ಅವರೆಲ್ಲರೂ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂಬುದು ಬೆಳಕಿಗೆ ಬಂದಿದೆ.
