ಬಳ್ಳಾರಿ: ಹಳೆ ಪ್ರೇಮಿಯ ಕಿರುಕುಳ ಹಾಗೂ ಖಾಸಗಿ ಫೋಟೋ ವೈರಲ್ ಮಾಡುವ ಬೆದರಿಕೆಗೆ ಹೆದರಿ ಟೆಕ್ಕಿ ಯುವತಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೌಲ್ ಬಜಾರ್ ನಿವಾಸಿ ಫಿರ್ದೋಸ್ (28) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈಕೆ, ಸ್ವಗ್ರಾಮಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.
ಸಿನಿಮೀಯ ರೀತಿಯ ತ್ರಿಕೋನ ಪ್ರೇಮ ಕಥೆ:
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಫಿರ್ದೋಸ್ ಮೊದಲು ಕೌಲ್ ಬಜಾರ್ ಏರಿಯಾದ ಅಜೀಂ ಎಂಬಾತನನ್ನು ಪ್ರೀತಿಸುತ್ತಿದ್ದರು. ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ದುರುಪಯೋಗಪಡಿಸಿಕೊಂಡಿದ್ದ ಅಜೀಂ, ಆಕೆಗೆ ವಂಚಿಸಿದ್ದ ಎನ್ನಲಾಗಿದೆ. ಆತನ ನಡವಳಿಕೆಯಿಂದ ಬೇಸತ್ತ ಯುವತಿ, ತರುವಾಯ ಆತನಿಂದ ಅಂತರ ಕಾಯ್ದುಕೊಂಡಿದ್ದರು.
ಬಳಿಕ ಯುವತಿ, ಅಜೀಂನ ಸ್ನೇಹಿತ ಸೋಹೈಲ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದು, ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಕೆರಳಿದ ಹಳೆ ಪ್ರೇಮಿ ಅಜೀಂ, ಯುವತಿಯೊಂದಿಗಿದ್ದ ಹಳೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದ ಎನ್ನಲಾಗಿದೆ.
ಸೆಲ್ಫಿ ವಿಡಿಯೋ ಮಾಡಿ ಜೀವಾಂತ್ಯ:
ಹಳೆ ಪ್ರೇಮಿಯ ನಿರಂತರ ಮಾನಸಿಕ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ಗೆ ಮನನೊಂದ ಯುವತಿ, ಜೀವ ತೊರೆಯುವ ಮುನ್ನ ಹೊಸ ಪ್ರೇಮಿ ಸೋಹೈಲ್‌ಗೆ ಕರೆ ಮಾಡಿ ಅಜೀಂ ನೀಡುತ್ತಿದ್ದ ಕಿರುಕುಳದ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. ನಂತರ ಸೆಲ್ಫಿ ವಿಡಿಯೋ ಹರೆಬಿಟ್ಟು, "ನನ್ನ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆಯಾಗಬೇಕು" ಎಂದು ಕಣ್ಣೀರಿಡುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಕರಣ ದಾಖಲು, ಆರೋಪಿಗಳ ಪತ್ತೆಗೆ ಜಾಲ:
ಘಟನೆ ಸಂಬಂಧ ಮೃತರ ಕುಟುಂಬಸ್ಥರು ನೀಡಿರುವ ದೂರಿನನ್ವಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿಗಳಾದ ಅಜೀಂ ಹಾಗೂ ಸೋಹೈಲ್ ಇಬ್ಬರೂ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
