ರಾಜ್ಯ

​ಬೆಂಗಳೂರು : ರಸ್ತೆ ಅಪಘಾತ ಗಾಯಾಳುಗಳಿಗೆ ತಕ್ಷಣ ಸಿಗಲಿದೆ ಚಿಕಿತ್ಸೆ: ರಾಷ್ಟ್ರೀಯ ಹೆದ್ದಾರಿ ಆಂಬುಲೆನ್ಸ್ ಸೇವೆಗೆ ಬಿತ್ತು ಕಠಿಣ ನಿಯಮ!

 


ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಿಲುಕುವ ಸಂತ್ರಸ್ತರಿಗೆ 'ಗೋಲ್ಡನ್ ಅವರ್' ಒಳಗೆ ತುರ್ತು ಚಿಕಿತ್ಸೆ ಸಿಗುವಂತೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ನಿರ್ಧಾರ ಕೈಗೊಂಡಿದೆ. ಆಂಬುಲೆನ್ಸ್ ಸೇವೆಗಳಲ್ಲಿ ನಡೆಯುವ ವಿಳಂಬ ಮತ್ತು ಬೇಜವಾಬ್ದಾರಿಗೆ ಸಡ್ಡು ಹೊಡೆದಿರುವ ಪ್ರಾಧಿಕಾರ, ಹೊಸ ಕಾರ್ಯಚರಣೆ ನಿಯಮಗಳನ್ನು (SOP) ಜಾರಿಗೆ ತಂದಿದ್ದು, ನಿಯಮ ಮೀರಿದರೆ ಭಾರಿ ದಂಡದ ಬಿಸಿ ಮುಟ್ಟಿಸಲು ಮುಂದಾಗಿದೆ.

​ರಸ್ತೆ ಸುರಕ್ಷತೆ ಕುರಿತ ಸುಪ್ರೀಂ ಕೋರ್ಟ್ ಸಮಿತಿ ಹಾಗೂ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಸಲ್ಲಿಸಿದ್ದ ವರದಿಗಳಲ್ಲಿ ಹೆದ್ದಾರಿ ಆಂಬುಲೆನ್ಸ್ ಸೌಲಭ್ಯದ ಲೋಪದೋಷಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸುವ ಏಕೈಕ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

​📌 ಹೊಸ ನಿಯಮಗಳು ಮತ್ತು ವಿಧಿಸಲಾಗುವ ದಂಡದ ವಿವರ:

  • 10 ನಿಮಿಷದಲ್ಲಿ ಆಂಬುಲೆನ್ಸ್ ಹಾಜರ್: ಟೋಲ್ ಪ್ಲಾಜಾದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅಪಘಾತ ನಡೆದರೆ, ಮಾಹಿತಿ ತಲುಪಿದ 10 ನಿಮಿಷದೊಳಗೆ ಆಂಬುಲೆನ್ಸ್ ಘಟನಾ ಸ್ಥಳಕ್ಕೆ ತಲುಪಬೇಕು. ವಿಳಂಬವಾದರೆ ಪ್ರತಿ ಪ್ರಕರಣಕ್ಕೆ ₹10,000 ದಂಡ ವಿಧಿಸಲಾಗುತ್ತದೆ.
  • 2 ನಿಮಿಷದಲ್ಲಿ ವಾಹನ ಸ್ಟಾರ್ಟ್ ಆಗಬೇಕು: ಎಮರ್ಜೆನ್ಸಿ ಕಾಲ್ ಬಂದ ತಕ್ಷಣ ಸಿಬ್ಬಂದಿ ಅಲರ್ಟ್ ಆಗಬೇಕು. ಕರೆ ಬಂದ 2 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ಹೊರಡಬೇಕು. ತಡವಾದರೆ ಪ್ರತಿ ಹೆಚ್ಚುವರಿ ನಿಮಿಷಕ್ಕೆ ₹5,000 ದಂಡ ಬೀಳಲಿದೆ.
  • 1 ಗಂಟೆಯೊಳಗೆ ಆಸ್ಪತ್ರೆಗೆ ದಾಖಲು: ಸಂತ್ರಸ್ತರನ್ನು ಆಂಬುಲೆನ್ಸ್‌ಗೆ ಹತ್ತಿಸಿದ ನಂತರ 1 ಗಂಟೆಯೊಳಗೆ ಹತ್ತಿರದ ಆಸ್ಪತ್ರೆಗೆ ಸೇರಿಸುವುದು ಕಡ್ಡಾಯ. ಈ ಗಡುವು ಮೀರಿದರೆ ₹10,000 ದಂಡ ಅನ್ವಯಿಸುತ್ತದೆ (10 ಕಿ.ಮೀ ಗಿಂತ ಹೆಚ್ಚಿನ ದೂರವಿದ್ದರೆ ರಸ್ತೆ ಅಂತರಕ್ಕೆ ತಕ್ಕಂತೆ ಹೆಚ್ಚುವರಿ ಸಮಯ ಸಿಗಲಿದೆ).
  • GPS ಮತ್ತು ಡ್ಯಾಶ್‌ಬೋರ್ಡ್ ಟ್ರ್ಯಾಕಿಂಗ್: ಪ್ರತಿಯೊಂದು ಆಂಬುಲೆನ್ಸ್‌ನಲ್ಲೂ AIS-140 ಮಾನದಂಡದ GPS ಕಡ್ಡಾಯ. ಇವುಗಳನ್ನು IMS Care ಡ್ಯಾಶ್‌ಬೋರ್ಡ್ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ವಾಹನದಲ್ಲಿ GPS ಇಲ್ಲದಿದ್ದರೆ ಅಥವಾ ಡ್ಯಾಶ್‌ಬೋರ್ಡ್‌ನಲ್ಲಿ ಟ್ರ್ಯಾಕ್ ಆಗದಿದ್ದರೆ ದಿನಕ್ಕೆ ₹2,500 ದಂಡ ತೆರಬೇಕಾಗುತ್ತದೆ.
  • ಕರೆ ತಿರಸ್ಕರಿಸುವಂತಿಲ್ಲ: ಯಾವುದೇ ಕಾರಣಕ್ಕೂ ತುರ್ತು ಕರೆಯನ್ನು ನಿರ್ಲಕ್ಷಿಸುವಂತಿಲ್ಲ ಅಥವಾ ತಿರಸ್ಕರಿಸುವಂತಿಲ್ಲ. ಕರೆ ರಿಜೆಕ್ಟ್ ಮಾಡಿದರೆ ₹10,000 ದಂಡ ನಿಗದಿಯಾಗಿದೆ.
  • ಸಜ್ಜಿತ ವೈದ್ಯಕೀಯ ಸೌಲಭ್ಯ ಕಡ್ಡಾಯ: ಆಂಬುಲೆನ್ಸ್‌ನಲ್ಲಿ ಜೀವ ರಕ್ಷಕ ಉಪಕರಣಗಳು, ತುರ್ತು ಔಷಧಿಗಳು ಹಾಗೂ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಇಲ್ಲದಿರುವುದು ಕಂಡುಬಂದರೆ ₹10,000 ದಂಡ ವಿಧಿಸಲಾಗುತ್ತದೆ.
  • ದೈನಂದಿನ 'ಮಾಕ್ ಡ್ರಿಲ್' ಕಡ್ಡಾಯ:

    ವಾಹನಗಳು ಸದಾ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನ ಕನಿಷ್ಠ 5 ಕಿ.ಮೀ. 'ಡ್ರೈ ರನ್' (ಮಾಕ್ ಡ್ರಿಲ್) ನಡೆಸುವುದು ಕಡ್ಡಾಯ. ಆದರೆ, ಅದೇ ದಿನ ತುರ್ತು ಸೇವೆಯಾಗಿ 5 ಕಿ.ಮೀ ಗಿಂತ ಹೆಚ್ಚು ಸಂಚರಿಸಿದ್ದರೆ ಈ ಅಭ್ಯಾಸದಿಂದ ವಿನಾಯಿತಿ ಇರಲಿದೆ.














     



image