ಕ್ರೈಂ

ದಾವಣಗೆರೆ: ಅಕ್ರಮ ಸಂಬಂಧಕ್ಕೆ ಗಂಡ ಬಲಿ; ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ ಬಂಧನ

 


​ದಾವಣಗೆರೆ: ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಶಂಕೆಗೆ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಾಳಿ ಕಟ್ಟಿದ ಗಂಡನನ್ನೇ ಪ್ರಿಯಕರ ಹಾಗೂ ಆತನ ಸ್ನೇಹಿತನ ನೆರವಿನಿಂದ ಹತ್ಯೆಗೈದು, ಶವವನ್ನು ನದಿಗೆ ಎಸೆದಿದ್ದ ಆರೋಪಿ ಮಹಿಳೆಯನ್ನು ಹದಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

​ಪಾಮೇನಹಳ್ಳಿ ನಿವಾಸಿ ರಘು (36) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿದ ಆರೋಪದ ಮೇಲೆ ಆತನ ಪತ್ನಿ ಶ್ರುತಿ, ಆಕೆಯ ಪ್ರಿಯಕರ ಉಬೇದುಲ್ಲಾ ಅಲಿಯಾಸ್ ಮುನ್ನಾ ಹಾಗೂ ಆತನ ಸ್ನೇಹಿತ ಸುರೇಶ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

​ಘಟನೆಯ ವಿವರ:

ರಘು ಹಾಗೂ ಶ್ರುತಿ ದಂಪತಿಗೆ ಮದುವೆಯಾಗಿ 12 ವರ್ಷಗಳಾಗಿದ್ದವು. ಕಳೆದ ಎರಡು ವರ್ಷಗಳಿಂದ ಶ್ರುತಿ ಹಾಗೂ ಉಬೇದುಲ್ಲಾ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಪತಿ ರಘು ನಿತ್ಯ ಮದ್ಯಪಾನ ಮಾಡಿ ಬಂದು ಜಗಳವಾಡುತ್ತಿದ್ದ ವಿಚಾರವನ್ನೇ ನೆಪವಾಗಿಟ್ಟುಕೊಂಡ ಆರೋಪಿಗಳು, ಆತನನ್ನು ಸಂಪೂರ್ಣವಾಗಿ ಮುಗಿಸಲು ಸಂಚು ರೂಪಿಸಿದ್ದರು.

​ಕುಡಿಸಿ ಕರೆದೊಯ್ದು ಹತ್ಯೆ:

ರಘುವಿನ ಕುಡಿತದ ಚಟವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಆತನನ್ನು ದಾವಣಗೆರೆಯ ಬಾರ್‌ ಒಂದಕ್ಕೆ ಕರೆದೊಯ್ದು ಅತಿಯಾಗಿ ಮದ್ಯ ಸೇವಿಸುವಂತೆ ಮಾಡಿದ್ದಾರೆ. ಬಳಿಕ ಹರಿಹರ ಬಳಿಯ ತುಂಗಭದ್ರಾ ನದಿ ದಂಡೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೃತ್ಯದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ನದಿಗೆ ಎಸೆದು ಪರಾರಿಯಾಗಿದ್ದರು.

​ನಾಪತ್ತೆ ನಾಟಕವಾಡಿದ ಪತ್ನಿ:

ಪತಿಯನ್ನು ಹತ್ಯೆ ಮಾಡಿಸಿದ ಬಳಿಕ ಏನೂ ತಿಳಿಯದವಳಂತೆ ಪೋಸ್ ನೀಡಿದ್ದ ಶ್ರುತಿ, ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಶ್ರುತಿಯ ಸಹೋದರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹಾಗೂ ಪೊಲೀಸರ ತನಿಖೆ ತೀವ್ರಗೊಂಡಾಗ ಕೊಲೆಯ ಅಸಲಿ ಸತ್ಯ ಹೊರಬಿದ್ದಿದೆ.

​ಸದ್ಯ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ನದಿಯಲ್ಲಿ ರಘುವಿನ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.



image