ಉಳ್ಳಾಲ: ದೇಶದ ಸಿದ್ಧಾಂತ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ತ್ರಿವರ್ಣ ಧ್ವಜವು ತ್ಯಾಗ, ಶಾಂತಿ ಹಾಗೂ ಪ್ರಗತಿಯ ಸಂಕೇತವಾಗಿದೆ. ಇಂತಹ ಪವಿತ್ರ ಧ್ವಜಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ 'ಹರ್ ಘರ್ ತಿರಂಗಾ' ಹಾಗೂ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ 'ತಿರಂಗಾ ಯಾತ್ರೆ' ನಡೆಸುವ ಪರಿಕಲ್ಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರೇರಣೆಯಾಗಿದ್ದಾರೆ. ಅವರ ಸಕ್ಷಮ ನೇತೃತ್ವದಲ್ಲಿ ಭಾರತವು ಶೀಘ್ರದಲ್ಲೇ 'ವಿಶ್ವಗುರು' ಸ್ಥಾನಕ್ಕೇರಲಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ 'ತಿರಂಗಾ ಯಾತ್ರೆ ಸಮಿತಿ'ಯ ಆಶ್ರಯದಲ್ಲಿ ತೊಕ್ಕೊಟ್ಟಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ವರ್ಣರಂಜಿತ ಹಾಗೂ ದೇಶಭಕ್ತಿಯ ಜಾಗೃತಿ ಯಾತ್ರೆಯು ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಿಂದ ಪ್ರಾರಂಭಗೊಂಡು ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ನೂರಾರು ಕಾರ್ಯಕರ್ತರು ಹಾಗೂ ದೇಶಪ್ರೇಮಿಗಳು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಕಾರ್ಯಕ್ರಮಕ್ಕೆ ಕಾರ್ಗಿಲ್ ಯೋಧ ಪ್ರವೀಣ್ ಶೆಟ್ಟಿ ಪಿಲಾರು ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು ಅವರು ಸಮಯೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಈ ಬೃಹತ್ ಯಾತ್ರೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಸೇರಿದಂತೆ ಹಲವು ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
