ಪುಂಜಾಲಕಟ್ಟೆ: ತುರ್ತು ಆರೋಗ್ಯ ಚಿಕಿತ್ಸೆಗಾಗಿ ಇಟ್ಟುಕೊಂಡಿದ್ದ ಹಣವನ್ನು ಬಸ್ಸಿನಲ್ಲಿ ಕಳೆದುಕೊಂಡು ಕಂಗಾಲಾಗಿದ್ದ ವೃದ್ಧರೊಬ್ಬರಿಗೆ, ಸಹಪ್ರಯಾಣಿಕ ಯುವಕನೊಬ್ಬ ಹಣವನ್ನು ಸುರಕ್ಷಿತವಾಗಿ ಮರಳಿಸಿ ಮಾನವೀಯತೆ ಮೆರೆದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ವೃದ್ಧರೊಬ್ಬರು ಕುಧ್ಕೋಳಿಯಿಂದ ಮಹಾಲಸ ಟ್ರಾವೆಲ್ಸ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ತಮ್ಮ ದೇಹದ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ ವೆಚ್ಚಕ್ಕಾಗಿ ಇಟ್ಟುಕೊಂಡಿದ್ದ 20,000 ರೂಪಾಯಿ ನಗದು ಮತ್ತು ಔಷಧಿ ಮಾತ್ರೆಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಬಸ್ಸಿನಲ್ಲಿಯೇ ಮರೆತು ಇಳಿದಿದ್ದರು. ನೇರಳಕಟ್ಟೆ ಬಸ್ ಸ್ಟಾಪ್‌ಗೆ ತಲುಪಿದ ಮೇಲೆಯೇ ಚೀಲ ಕಳೆದುಹೋದ ವಿಷಯ ತಿಳಿದು, ದಾರಿ ತೋಚದೆ ವೃದ್ಧರು ಪರದಾಡುತ್ತಿದ್ದರು.
ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಯನಾಡು ನಿವಾಸಿ ಕಿರಣ್ ಅವರಿಗೆ ಈ ಪ್ಲಾಸ್ಟಿಕ್ ಚೀಲ ಸಿಕ್ಕಿತ್ತು. ತಕ್ಷಣವೇ ಜಾಗರೂಕರಾದ ಅವರು, ಹಣ ಮತ್ತು ಸಾಮಗ್ರಿಗಳನ್ನು ಕಳೆದುಕೊಂಡ ವೃದ್ಧರನ್ನು ಹುಡುಕಿ, ಸುರಕ್ಷಿತವಾಗಿ ಅವರ ಬಳಿಯಿದ್ದ ಸಂಪೂರ್ಣ ಹಣವನ್ನು ಹಸ್ತಾಂತರಿಸಿದ್ದಾರೆ.
ಕಷ್ಟದ ಸಮಯದಲ್ಲಿ ತಮಗೆ ಸಿಕ್ಕ ಈ ಆಸರೆಯಿಂದ ಭಾವುಕರಾದ ವೃದ್ಧರು, ಕಳೆದುಹೋದ ಹಣ ಕೈಸೇರಿದ ಸಂತಸದಲ್ಲಿ ಯುವಕ ಕಿರಣ್ ಅವರಿಗೆ ಮನಃಪೂರ್ವಕವಾಗಿ ಹಾರೈಸಿ ಧನ್ಯವಾದ ಅರ್ಪಿಸಿದರು.
ಸಮಾಜಮುಖಿ ಯುವಕನಿಗೆ ಶ್ಲಾಗನೆ:
ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ಕಿರಣ್ ನಯನಾಡು ಅವರು ಈಗಾಗಲೇ ಬಂಟ್ವಾಳ ಹಾಗೂ ಬೆಳ್ತಂಗಡಿ ಪರಿಸರದಲ್ಲಿ ಹಲವು ಸಾಮಾಜಿಕ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 'ಪರೋಪಕಾರಾರ್ಥಂ ಇದಂ ಶರೀರಂ' ಎಂಬಂತೆ ಕಿರಣ್ ಅವರು ತೋರಿದ ಈ ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
