ಪುತ್ತೂರು: ಪ್ರಕೃತಿಯ ವಿಕೋಪ ಹಾಗೂ ಭೀಕರ ಮಳೆಯ ನಡುವೆಯೂ ಸಾರ್ವಜನಿಕ ಸೇವೆಗೆ ಆದ್ಯತೆ ನೀಡಿ, ಜೀವದ ಹಂಗು ತೊರೆದು ಸಾಹಸ ಮೆರೆದ ಮೆಸ್ಕಾಂ ಲೈನ್‌ಮ್ಯಾನ್ ಒಬ್ಬರ ಅಪರೂಪದ ಕರ್ತವ್ಯನಿಷ್ಠೆ ಬೆಳಕಿಗೆ ಬಂದಿದೆ.
ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸಮೀಪದ ಧೂಮಡ್ಕ ಎಂಬಲ್ಲಿ ಹರಿಯುವ ಸೀರೆ ನದಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇದರಿಂದಾಗಿ ಗ್ರಾಮೀಣ ಭಾಗದ ಕತ್ತಲೆಯಲ್ಲಿ ಮುಳುಗಿದ್ದ ಜನರಿಗೆ ಬೆಳಕು ನೀಡಲು ಬೆಟ್ಟಂಪಾಡಿ ಮೆಸ್ಕಾಂ ಕಚೇರಿಯ ಲೈನ್‌ಮ್ಯಾನ್ ಬಂದೇ ನವಾಜ್ ಅವರು ಮುಂದಾದರು.
ಧಾರಾಕಾರ ಮಳೆಯಿಂದಾಗಿ ನದಿಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಉಕ್ಕಿ ಹರಿಯುತ್ತಿತ್ತು. ನದಿಯ ಪ್ರಬಲ ಸೆಳೆತವನ್ನು ಲೆಕ್ಕಿಸದೆ ಈಜಿ ದಾಟಿದ ಬಂದೇ ನವಾಜ್, ನೀರಿನಲ್ಲಿದ್ದ ವಿದ್ಯುತ್ ತಂತಿಯನ್ನು ಹೊರತೆಗೆದು ಯಶಸ್ವಿಯಾಗಿ ಮರುಸಂಪರ್ಕ ಕಲ್ಪಿಸಿದರು. ಅವರ ಈ ಸಾಹಸದಿಂದಾಗಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ತಕ್ಷಣವೇ ವಿದ್ಯುತ್ ಸರಬರಾಜು ಪುನರಾರಂಭಗೊಂಡಿದೆ.
ನದಿಯ ರಭಸಕ್ಕೆ ಹೆದರದೆ ಲೈನ್‌ಮ್ಯಾನ್ ಕರ್ತವ್ಯ ನಿರ್ವಹಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಹಾಗೂ ನೆಟ್ಟಿಗರು ಬಂದೇ ನವಾಜ್ ಅವರ ಧೈರ್ಯ ಮತ್ತು ಸೇವಾ ಮನೋಭಾವಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
