ಧಾರವಾಡ: ಪ್ರೀತಿಸಿದ ಯುವತಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಸುದ್ದಿ ತಿಳಿಯುತ್ತಿದ್ದಂತೆ, ಆಕೆಯ ವಿರಹ ತಾಳಲಾರದೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಧಾರವಾಡ ತಾಲೂಕಿನ ಕೋಟಬಾಗಿ ಗ್ರಾಮದ ನಿವಾಸಿ ತರುಣ್ ಸಾಗರ್ ಕುರಕುರಿ (21) ಮೃತ ದುರ್ದೈವಿ. ಈತ ನಗರದ ವಾಚ್ ಶೋರೂಮ್ ಒಂದರಲ್ಲಿ ಉದ್ಯೋಗಿಯಾಗಿದ್ದನು.
ಘಟನೆಯ ಹಿನ್ನೆಲೆ:
ತರುಣ್ ಸಾಗರ್ ಹಾಗೂ ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಗುಬ್ಬನ್ನವರ್ (20) ಪರಸ್ಪರ ಪ್ರೀತಿಸುತ್ತಿದ್ದರು. ಬುಧವಾರ ಮೇಘಾ ಮನೆಯಲ್ಲಿ ಪೋಷಕರು "ಅತಿಯಾಗಿ ಮೊಬೈಲ್ ಬಳಸಬೇಡ" ಎಂದು ಬುದ್ಧಿವಾದ ಹೇಳಿ ಬೈದಿದ್ದರೆನ್ನಲಾಗಿದೆ. ಇದರಿಂದ ಮನನೊಂದ ಮೇಘಾ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.
ವಿರಹ ತಾಳಲಾರದೆ ಪ್ರಾಣ ಬಿಟ್ಟ ಪ್ರಿಯಕರ:
ತನ್ನ ಪ್ರೇಯಸಿ ಮೇಘಾ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತಿದ್ದಂತೆ ತರುಣ್ ತೀವ್ರ ಆಘಾತಕ್ಕೊಳಗಾಗಿದ್ದನು. ಬುಧವಾರ ರಾತ್ರಿ ದಾನೇಶ್ವರಿ ನಗರದಲ್ಲಿದ್ದ ತನ್ನ ಸ್ನೇಹಿತನ ಪಿಜಿ (PG) ಕೊಠಡಿಗೆ ಬಂದು ತಂಗಿದ್ದ ಈತ, "ನನ್ನ ಹಾಗೂ ಮೇಘಾ ನಡುವೆ ಜಗಳವಾಗಿತ್ತು, ಈ ವಿಷಯ ಆಕೆಯ ಸಹೋದರನಿಗೂ ಗೊತ್ತಾಗಿದೆ" ಎಂದು ಸ್ನೇಹಿತನ ಬಳಿ ನೋವು ತೋಡಿಕೊಂಡಿದ್ದ ಎನ್ನಲಾಗಿದೆ.
ಬಿಕರಿ ವಾತಾವರಣದಲ್ಲಿದ್ದ ತರುಣ್, ಗುರುವಾರ ಮುಂಜಾನೆ ಸ್ನೇಹಿತನ ಪಿಜಿಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಗುರುವಾರ ಬೆಳಿಗ್ಗೆ ತರುಣ್ ಫೋನ್ ಕರೆಗಳನ್ನು ಸ್ವೀಕರಿಸದಿದ್ದಾಗ ಆತಂಕಗೊಂಡ ಪೋಷಕರು ಹಾಗೂ ಸ್ನೇಹಿತರು ಹುಡುಕಾಟ ನಡೆಸಿದಾಗ ಈ ದಾರುಣ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ತನಿಖೆ ಚುರುಕು:
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿದ್ಯಾಗಿರಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆ ಮುಂದುವರಿಸಿದ್ದಾರೆ.
