ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಕೊನೆಯುಸಿರೆಳೆದ ದಾರುಣ ಘಟನೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್‌ಗೇಟ್ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ.
ದಾವಣಗೆರೆಯ ನಿಟವಳ್ಳಿ ಮೌನೇಶ್ವರ ಬಡಾವಣೆಯ ನಿವಾಸಿ ಯಶೋಧಾಬಾಯಿ (51), ಅವರ ಪುತ್ರರಾದ ಸಿದ್ಧಾರ್ಥ (27) ಮತ್ತು ಹಸನ್ಮುಖ (29) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು.
ಪುಟ್ಟ ಕಂದನ ಜನ್ಮದಿನ ಆಚರಿಸಿ ಮರಳುವಾಗ ದುರಂತ
ಹಸನ್ಮುಖ ಅವರ ಒಂದು ವರ್ಷದ ಹೆಣ್ಣು ಮಗು ಕಶ್ವಿ ಅವರ ಜನ್ಮದಿನದ ಅಂಗವಾಗಿ ಇಡೀ ಕುಟುಂಬ ಕಾರವಾರ ಪ್ರವಾಸಕ್ಕೆ ತೆರಳಿತ್ತು. ಕಾರವಾರದಲ್ಲಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡು ಸ್ವಊರಾದ ದಾವಣಗೆರೆಗೆ ವಾಪಸ್ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಹಸನ್ಮುಖ ಅವರ ಪತ್ನಿ ಸೌಂದರ್ಯಾ (26), ಮಗಳು ಕಶ್ವಿ (1) ಹಾಗೂ ಬಂಧು ಸಿಂಧೂ (24) ಅವರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣವೇ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರ ಪೈಕಿ ಸಿದ್ಧಾರ್ಥ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಕೆಎಸ್‌ಆರ್‌ಟಿಸಿ) ಸೇವೆ ಸಲ್ಲಿಸುತ್ತಿದ್ದರೆ, ಹಸನ್ಮುಖ ಅವರು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
