ದಕ್ಷಿಣ ಕನ್ನಡ

ಉಜಿರೆ : ಕೌಶಲ್ಯದ ಜೊತೆ ಗುಣಮಟ್ಟದ ಕೆಲಸವೇ ನಿಮ್ಮ ನಿಜವಾದ ಗುರುತು: ಪ್ರತಾಪ್ ಸಿಂಹ ನಾಯಕ್



ಉಜಿರೆ: “ಸಾಮಾನ್ಯ ವ್ಯಕ್ತಿ ಲಭ್ಯವಿರುವ ಅವಕಾಶಕ್ಕಾಗಿ ಕಾಯುತ್ತ ಕೂರುತ್ತಾನೆ. ಆದರೆ ಅಸಾಮಾನ್ಯ ಸಾಮರ್ಥ್ಯವುಳ್ಳ ವ್ಯಕ್ತಿ ತನಗೆ ಬೇಕಾದ ಅವಕಾಶವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. ಹೀಗಾಗಿ, ತರಬೇತಿಯಲ್ಲಿ ನೀವು ಗಳಿಸಿದ ಕೌಶಲ್ಯವನ್ನು ಬರಿ ನೌಕರಿಗಾಗಿ ಸೀಮಿತಗೊಳಿಸದೆ, ನಾಲ್ವರಿಗೆ ಉದ್ಯೋಗ ನೀಡುವ ಸ್ವಾವಲಂಬಿ ಉದ್ಯಮವಾಗಿ ಬೆಳೆಸಬೇಕು” ಎಂದು ಕರ್ನಾಟಕ ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯ ಹಾಗೂ ಕೇಂದ್ರೀಯ ನೋಟರಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕರೆ ನೀಡಿದರು.

​ಇಲ್ಲಿನ ಸಿದ್ಧವನದ ರುಡ್‌ಸೆಟ್ ಸಂಸ್ಥೆಯು ಆಯೋಜಿಸಿದ್ದ 1000ನೇ ಫೋಟೋಗ್ರಫಿ-ವಿಡಿಯೋಗ್ರಫಿ ಹಾಗೂ 998ನೇ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ತರಬೇತಿ ಶಿಬಿರಗಳ ಜಂಟಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.​



ತರಬೇತಿ ಸಂಸ್ಥೆಯಿಂದ ಹೊರಬಿದ್ದ ಮೇಲೆಯೇ ಅಸಲಿ ಪರೀಕ್ಷೆ ಶುರುವಾಗುತ್ತದೆ ಎಂದ ಅವರು, “ತರಬೇತಿಯಲ್ಲಿ ಸಿಕ್ಕ ಜ್ಞಾನವನ್ನು ಮಾರುಕಟ್ಟೆಯಲ್ಲಿ ಸರಿಯಾಗಿ ಬಳಸಿಕೊಂಡು ಆರ್ಥಿಕ ಪ್ರಗತಿ ಕಂಡಾಗ ಮಾತ್ರ ಪಡೆದ ತರಬೇತಿಗೆ ನೈಜ ಬೆಲೆ ಸಿಗುತ್ತದೆ. ಇಂದಿನ ಪೈಪೋಟಿಯ ಯುಗದಲ್ಲಿ ಪದವಿ ಪ್ರಮಾಣಪತ್ರಗಳು ವಿದ್ಯಾರ್ಹತೆಯನ್ನು ತೋರಿಸಿದರೆ, ನಿಮ್ಮಲ್ಲಿನ ಕೌಶಲ್ಯವು ಸಾಮರ್ಥ್ಯವನ್ನು ಬಿಂಬಿಸುತ್ತದೆ. ಆದರೆ, ನೀವು ನೀಡುವ ಕೆಲಸದ ಗುಣಮಟ್ಟವೇ ಮಾರುಕಟ್ಟೆಯಲ್ಲಿ ನಿಮ್ಮ ಅಂತಿಮ ಗುರುತನ್ನು ನಿರ್ಧರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

​ಫೋಟೋಗ್ರಫಿ, ವಿಡಿಯೋಗ್ರಫಿ, ಜಿಎಸ್‌ಟಿ ಹಾಗೂ ಕಂಪ್ಯೂಟರ್ ಅಕೌಂಟಿಂಗ್‌ಗಳಲ್ಲಿ ದಿನೇದಿನೆ ತಂತ್ರಜ್ಞಾನ ಆಧುನೀಕರಣಗೊಳ್ಳುತ್ತಿದೆ. ಮಾರುಕಟ್ಟೆಯ ಇಂದಿನ ಬೇಡಿಕೆಗೆ ತಕ್ಕಂತೆ ಕೌಶಲ್ಯವನ್ನು ನಿರಂತರವಾಗಿ ಮೇಲ್ದರ್ಜೆಗೇರಿಸಿಕೊಳ್ಳಬೇಕು. ಬೇರೆಯವರನ್ನು ಅನುಕರಿಸುವ ಬದಲು ಹೊಸತನಕ್ಕೆ ಒತ್ತು ನೀಡಿದಾಗ ಮಾತ್ರ ಅಸಾಮಾನ್ಯ ಯಶಸ್ಸು ಗಳಿಸಲು ಸಾಧ್ಯ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

​


ಬ್ಯಾಂಕ್ ಸಾಲವನ್ನು ಉತ್ಪಾದಕ ಉದ್ದೇಶಕ್ಕೆ ಬಳಸಿ: ಬಿ.ಪಿ. ವಿಜಯಕುಮಾರ್

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್, “ಬಂಡವಾಳವಿಲ್ಲ ಎಂಬ ಕಾರಣಕ್ಕೆ ಯಾರೂ ಉದ್ಯಮದ ಕನಸನ್ನು ಕೈಬಿಡಬೇಕಿಲ್ಲ. ಸೂಕ್ತ ಯೋಜನೆ ಹಾಗೂ ಪರಿಶ್ರಮವಿದ್ದರೆ ಬ್ಯಾಂಕ್‌ಗಳು ಬೆಂಬಲವಾಗಿ ನಿಲ್ಲುತ್ತವೆ. ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ತಪ್ಪಲ್ಲ, ಅದನ್ನು ಸರಿಯಾದ ಉದ್ಯಮಕ್ಕೆ ಬಳಸದಿರುವುದು ತಪ್ಪು. ಪಡೆದ ಸಾಲವನ್ನು ನಿಯಮಿತವಾಗಿ ಮರುಪಾವತಿಸಿ, ಲಾಭದ ಒಂದು ಭಾಗವನ್ನು ಉದ್ಯಮದ ವಿಸ್ತರಣೆಗೆ ಮರುಹೂಡಿಕೆ ಮಾಡಬೇಕು” ಎಂದರು.

​ಅಲ್ಲದೆ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ರುಡ್‌ಸೆಟ್ ಗ್ರಾಮೀಣ ಯುವಜನತೆಗೆ ಸ್ವಾವಲಂಬನೆಯ ಹಾದಿ ತೋರುತ್ತಿದ್ದು, 1000ನೇ ಫೋಟೋಗ್ರಫಿ-ವಿಡಿಯೋಗ್ರಫಿ ತರಬೇತಿಯ ಪೂರ್ಣಗೊಳಿಸುವಿಕೆ ಸಂಸ್ಥೆಯ ನಾಲ್ಕು ದಶಕಗಳ ಪಯಣದ ಪ್ರಮುಖ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದರು.

​ಜುಲೈ 20ರಿಂದ ಆಗಸ್ಟ್ 29ರವರೆಗೆ ನಡೆದ ಫೋಟೋಗ್ರಫಿ ಹಾಗೂ ಜುಲೈ 24ರಿಂದ ಆಗಸ್ಟ್ 31ರವರೆಗೆ ನಡೆದ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದೇ ವೇಳೆ ಪ್ರಮಾಣಪತ್ರ ವಿತರಿಸಲಾಯಿತು.


ಸಮಾರಂಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುನೀಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತರಬೇತಿ ಪಡೆದ ಅಭ್ಯರ್ಥಿಗಳು ಅನುಭವ ಹಂಚಿಕೊಂಡರು. ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ವಂದಿಸಿ, ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.



image