ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತ ಪೂಜಾ ಮಹೋತ್ಸವವು ಮಹಿಳಾ ಸಮಿತಿಯ ಸಹಯೋಗದೊಂದಿಗೆ ಶುಕ್ರವಾರ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ನೆರವೇರಿತು.
ಅರ್ಚಕರಾದ ಶ್ರೀ ಗೋಪಾಲಕೃಷ್ಣ ಐತಾಳ್ ಲಡ್ಡುಕೊಂಡಿ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ಜರುಗಿದವು. ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ದೇವಿಗೆ ನೆರವೇರಿಸಲಾದ ವಿಶೇಷ ಪುಷ್ಪಾಲಂಕಾರ ಹಾಗೂ ಪೂಜಾ ಕೈಂಕರ್ಯಗಳು ಭಕ್ತಾದಿಗಳ ಮನಸೆಳೆದವು. ಶ್ರಾವಣ ಮಾಸದ ಈ ಪವಿತ್ರ ಪೂಜೆಯಲ್ಲಿ ನೂರಾರು ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಸದ್ಭಕ್ತರು ಪಾಲ್ಗೊಂಡು ದೇವಿಯ ಕೃಪಾಸಿರಿಗೆ ಭಾಜನರಾದರು.
ಪೂಜಾ ಕಾರ್ಯಕ್ರಮದ ಬಳಿಕ ವೇದಮೂರ್ತಿ ಶ್ರೀ ವಿಜಯ ಕೃಷ್ಣ ಐತಾಳ್ ಪೂಂಜೂರು ಅವರು ‘ವರಮಹಾಲಕ್ಷ್ಮೀ ವ್ರತಾಚರಣೆಯ ಧಾರ್ಮಿಕ ಮಹತ್ವ’ ಕುರಿತು ಬೋಧಪ್ರದ ಉಪನ್ಯಾಸ ನೀಡಿದರು. ತದನಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ಜರುಗಿತು.
ಈ ಧಾರ್ಮಿಕ ಮಹೋತ್ಸವದಲ್ಲಿ ಪ್ರಧಾನ ಅರ್ಚಕರಾದ ಸುಧೀರ್ ಭಟ್, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಲ್ಲದೆ ಮಹಾವಿಷ್ಣು ಭಜನಾ ಮಂಡಳಿ, ಮಹಾವಿಷ್ಣು ಸೇವಕರ ಬಳಗ ಹಾಗೂ ಇಳಿಯೂರು ಮಹಾವಿಷ್ಣು ಯುವಕರ ಬಳಗ (ರಿ.)ದ ಪದಾಧಿಕಾರಿಗಳು, ಸದಸ್ಯರು ಮತ್ತು ಊರು-ಪರಊರುಗಳಿಂದ ಆಗಮಿಸಿದ ನೂರಾರು ಸಂಖ್ಯೆಯ ಶ್ರದ್ಧಾಳುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



