ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ಹಾಗೂ ಪರಶುರಾಮ ಶಾಖೆ ಬಂಟ್ವಾಳ ನಗರ ಘಟಕದ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ರಕ್ತದಾನ ಶಿಬಿರ ಮತ್ತು ಪೋಸ್ಟ್ ಆಫೀಸ್‌ನ ಉಚಿತ ಆರೋಗ್ಯ ವಿಮೆ ನೋಂದಣಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಸಾರ್ವಜನಿಕ ಸೇವಾ ಕೈಂಕರ್ಯದ ಭಾಗವಾಗಿ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟು 203 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದೇ ವೇಳೆ ಅಂಚೆ ಇಲಾಖೆಯ ಸಹಯೋಗದೊಂದಿಗೆ ಸುಮಾರು 60ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಆರೋಗ್ಯ ವಿಮೆ ಸೌಲಭ್ಯವನ್ನು ಮಾಡಿಕೊಡಲಾಯಿತು.
ಧಾರ್ಮಿಕ ಹಾಗೂ ಸಾಂಸ್ಥಿಕ ಮುಖಂಡರಿಂದ ಚಾಲನೆ:
ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್, ಪ್ರಸಾದ್ ಕುಮಾರ್ ರೈ ಹಾಗೂ ಭುಜಂಗ ಕುಲಾಲ್ ಅವರು ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿ, ಸಂಘಟನೆಯ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಭಜರಂಗದಳದ ಪ್ರಮುಖರಾದ ಲೋಹಿತ್ ಪಣೋಲಿಬೈಲ್, ಸಚಿನ್ ಮೇಲ್ಕಾರ್, ಗೋಪಾಲ್ ಕುತ್ತಾರ್, ಸಂತೋಷ್ ಸರಪಾಡಿ ಸೇರಿದಂತೆ ಹಲವು ಹಿಂದೂ ಮುಖಂಡರು ಭಾಗವಹಿಸಿ ಶಿಬಿರಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಯಶಸ್ಸಿಗೆ ಬಜರಂಗದಳ ಬಂಟ್ವಾಳ ಪ್ರಖಂಡದ ಪದಾಧಿಕಾರಿಗಳು, ಬಂಟ್ವಾಳ ನಗರ ಘಟಕದ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಶ್ರಮಿಸಿದರು.


