ದಕ್ಷಿಣ ಕನ್ನಡ

ಬಂಟ್ವಾಳ : ಹೆದ್ದಾರಿಯಲ್ಲಿ ಕಾರು ಪಲ್ಟಿ – ಒಂದೇ ಕುಟುಂಬದ ಆರು ಮಂದಿಗೆ ಗಾಯ; ಅವೈಜ್ಞಾನಿಕ ಕಾಮಗಾರಿ ವಿರುದ್ಧ ಸ್ಥಳೀಯರ ಆಕ್ರೋಶ

 


ಬಂಟ್ವಾಳ (news2daykannada.com): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸೂರಿಕುಮೇರು ಬಳಿಯ ಹಿಂದೂಸ್ತಾನ್ ಪೆಟ್ರೋಲ್‌ ಪಂಪ್‌ ಸಮೀಪ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನರು ಗಾಯಗೊಂಡಿದ್ದಾರೆ.

​ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಸೂರಿಕುಮೇರು ತಲುಪುತ್ತಿದ್ದಂತೆ ದಿಢೀರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರಿನಲ್ಲಿ ಇಬ್ಬರು ಹಿರಿಯರು ಹಾಗೂ ನಾಲ್ವರು ಮಕ್ಕಳಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಸ್ಥಳೀಯರ ನೆರವಿನಿಂದ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ.

ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ:

ಈ ಭಾಗದಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ತೀರಾ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಅಥವಾ ಸೂಚನಾ ಫಲಕಗಳನ್ನು ಅಳವಡಿಸದಿರುವುದು, ರಸ್ತೆಯ ಅಸಮರ್ಪಕ ವಿನ್ಯಾಸ ಹಾಗೂ ಸುರಕ್ಷತಾ ಕ್ರಮಗಳ ಕೊರತೆಯೇ ಸರಣಿ ಅಪಘಾತಗಳಿಗೆ ಮುಖ್ಯ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

​ಈ ಸೂರಿಕುಮೇರು ತಿರುವಿನ ಪ್ರದೇಶದಲ್ಲಿ ಈ ಹಿಂದೆ ಕೂಡ ಹಲವಾರು ಅಪಘಾತಗಳು ಸಂಭವಿಸಿದ್ದು, ಅನೇಕರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಗುತ್ತಿಗೆದಾರ ಸಂಸ್ಥೆ ತಕ್ಷಣವೇ ಎಚ್ಚೆತ್ತುಕೊಂಡು, ರಸ್ತೆ ಕಾಮಗಾರಿಯ ದೋಷಗಳನ್ನು ಸರಿಪಡಿಸಿ ಅಗತ್ಯ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



image