ದಕ್ಷಿಣ ಕನ್ನಡ

ಕಾರ್ಕಳ: ಕಾಲೇಜು ಆವರಣದಲ್ಲೇ ಕುಸಿದುಬಿದ್ದು ಪ್ರಥಮ ಪಿಯುಸಿ ವಿದ್ಯಾರ್ಥಿ ದಾರುಣ ಸಾವು

 

ಕಾರ್ಕಳ: ತಾಲೂಕಿನ ಹಿರ್ಗಾನ ಗ್ರಾಮದ ಖಾಸಗಿ ಪದವಿ ಪೂರ್ವ ಕಾಲೇಜೊಂದರಲ್ಲಿ ಶುಕ್ರವಾರ ಬೆಳಗಿನ ಜಾವ ಶೋಕದ ವಾತಾವರಣ ಆವರಿಸಿದ್ದು, ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ವಿದ್ಯಾರ್ಥಿಯೊಬ್ಬ ಕಾಲೇಜು ಅಂಗಳದಲ್ಲೇ ಇದ್ದಕ್ಕಿದ್ದಂತೆ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

​ಮೃತ ದುರ್ದೈವಿ ವಿದ್ಯಾರ್ಥಿಯನ್ನು ತುಮಕೂರು ಜಿಲ್ಲೆಯ ತಿಪಟೂರು ಮೂಲದ ಎ.ಆರ್. ಮಂಜುನಾಥ್ ಅವರ ಪುತ್ರ ಚಿರಾಗ್ (16) ಎಂದು ಗುರುತಿಸಲಾಗಿದೆ. ಈತ ಕಾಲೇಜಿನ ವಸತಿನಿಲಯದಲ್ಲಿದ್ದುಕೊಂಡು ಪ್ರಥಮ ಪಿಯುಸಿಯಲ್ಲಿ ಶಿಕ್ಷಣ ಪಡೆಯುತ್ತಿದ್ದನು.

​ಆಗಸ್ಟ್ 21ರ ಶುಕ್ರವಾರ ಬೆಳಿಗ್ಗೆ 7:30ರ ಸುಮಾರಿಗೆ ಚಿರಾಗ್ ಕಾಲೇಜು ಆವರಣದಲ್ಲಿ ನಡೆದಾಡುತ್ತಿದ್ದಾಗ ದಿಢೀರನೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ತಕ್ಷಣವೇ ಆತನನ್ನು ಸಮೀಪದ ಕಾರ್ಕಳದ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ಎ.ಆರ್. ಮಂಜುನಾಥ್ ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 34/2026, ಕಲಂ 194 ಬಿಎನ್‌ಎಸ್‌ (BNSS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



image